ಧಾರಾಕಾರ ಮಳೆ ಹಾಗೂ ಅಣೆಕಟ್ಟಿನಿಂದ ಹೊರಬಿದ್ದ ನೀರಿನಿಂದ ಪ್ರವಾಹ ಸೃಷ್ಟಿಯಾದ ಕಾರಣ ಹೊನ್ನಾವರ ತಾಲೂಕಿನ ಅಂಗನವಾಡಿ ಹಾಗೂ ಶಾಲೆಗಳಿಗೆ ಅಗಸ್ಟ 30ರಂದು ರಜೆ ಘೋಷಿಸಲಾಗಿದೆ.
ಶಿಕ್ಷಣಾಧಿಕಾರಿ ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿಗಳ ವರದಿ ಆಧರಿಸಿ ತಹಶೀಲ್ದಾರ್ ಪ್ರವೀಣ ಕರಾಂಡೆ ಅವರು ರಜೆ ಆದೇಶ ಮಾಡಿದ್ದಾರೆ. ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾತ್ರ ಈ ರಜೆ ಅನ್ವಯ ಆಗಲಿದೆ. ಕಾಲೇಜುಗಳಿಗೆ ರಜೆ ಇಲ್ಲ.
ಜಿಲ್ಲಾಧಿಕಾರಿ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸೂಚನೆ ಮೇರೆಗೆ ಮಕ್ಕಳ ಸುರಕ್ಷತೆಗಾಗಿ ಈ ರಜೆ ನೀಡಲಾಗಿದೆ. ರಜಾ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿವಿಧ ಅಧಿಕಾರಿಗಳಿಗೆ ಸೂಚಿಸಲಾಗಿದೆ.
