ಹೊನ್ನಾವರದ ಕೋಣಕಾರದಲ್ಲಿರುವ ಬಸ್ ನಿಲ್ದಾಣ ಕುಡುಕರ ಅಡ್ಡೆಯಾಗಿದೆ. ಮದ್ಯ ಸೇವನೆ ನಂತರ ಅಲ್ಲಿಯೇ ಕುಡುಕರು ಮಲಗುತ್ತಿದ್ದು, ಅವರ ಅವಾಂತರ ನೋಡಿದ ಮಹಿಳಾ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ತೆರಳಲು ಹೆದರುತ್ತಿದ್ದಾರೆ.
ಪ್ರತಿ ದಿನ ಸಂಜೆ ಬಸ್ ನಿಲ್ದಾಣದ ಒಳಗೆ ಕುಡುಕರು ಪಾರ್ಟಿ ಮಾಡುತ್ತಾರೆ. ಅದಾದ ನಂತರ ಗಲೀಜುಗಳನ್ನು ಅಲ್ಲಿಯೇ ಬಿಡುತ್ತಾರೆ. ಕೆಲವರು ಮರುದಿನ ಬೆಳಗ್ಗೆಯವರೆಗೂ ಬಸ್ ನಿಲ್ದಾಣದಲ್ಲಿಯೇ ಮಲಗುತ್ತಾರೆ. ಶುಕ್ರವಾರ ಸಹ ಮದ್ಯ ವ್ಯಸನಿಯೊಬ್ಬ ಬಸ್ ನಿಲ್ದಾಣದಲ್ಲಿ ಮಲಗಿರುವುದು ಕಾಣಿಸಿತು. ಮೈಮೇಲೆ ಪ್ರಜ್ಞೆಯೇ ಇಲ್ಲದವರಂತೆ ಆತ ಇದ್ದಿದ್ದು, ಆತನಿರುವ ಕಾರಣಕ್ಕಾಗಿಯೇ ಜನ ಬಸ್ ನಿಲ್ದಾಣ ಪ್ರವೇಶಿಸಲು ಭಯಪಟ್ಟರು.
`ಬಸ್ ನಿಲ್ದಾಣಕ್ಕೆ ಬರುವ ಮಹಿಳಾ ಪ್ರಯಾಣಿಕರಿಗೆ ಕಾಟ ಕೊಡುವ ಪುಂಡ-ಪೋಕರಿಗಳ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು. ಪ್ರಯಾಣಿಕರ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು’ ಎಂದು ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಆಗ್ರಹಿಸಿದರು. `ಬಸ್ ನಿಲ್ದಾಣಗಳಲ್ಲಿ ಅಕ್ರಮ ಚಟುವಟಿಕೆ ನಡೆಯುವ ಬಗ್ಗೆ ಮಾಧ್ಯಮಗಳು ವರದಿ ಪ್ರಕಟಿಸಿದ್ದು, ಪೊಲೀಸರು ನಿತ್ಯ ಒಮ್ಮೆಯಾದರೂ ಬಸ್ ನಿಲ್ದಾಣಗಳ ತಪಾಸಣೆ ನಡೆಸಬೇಕು’ ಎಂದವರು ಆಗ್ರಹಿಸಿದರು.
