ಸಂಪ್ರದಾಯದ ಹೆಸರಿನಲ್ಲಿ ವಿಧವೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವಂತೆ ಜನಶಕ್ತಿ ವೇದಿಕೆ ಆಗ್ರಹಿಸಿದೆ. ಈ ಕುರಿತು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರ ಮೂಲಕ ಮುಖ್ಯಮಂತ್ರಿಗಳಿಗೆ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಪತ್ರ ಬರೆದಿದ್ದಾರೆ.
`ಪುರುಷ ಸಾವನಪ್ಪಿದ ನಂತರ ಈಗಲೂ ಆತನ ಪತ್ನಿ ಮೇಲೆ ದೌರ್ಜನ್ಯ ನಡೆಯುತ್ತಿದೆ. ವಿಧವೆಯರು ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕುವ ಹಕ್ಕಿದ್ದರೂ ಅವರನ್ನು ಕೀಳಾಗಿ ನೋಡಲಾಗುತ್ತದೆ’ ಎಂಬ ವಿಷಯವನ್ನು ಜನಶಕ್ತಿ ವೇದಿಕೆಯವರು ಪ್ರಸ್ತಾಪಿಸಿದ್ದಾರೆ. ತಾವು ನೋಡಿದ ವಿಷಯಗಳನ್ನು ಅವರು ಸರ್ಕಾರದ ಮುಂದಿರಿಸಿದ್ದು, ದೌರ್ಜನ್ಯ ತಡೆಗೆ ಮನವಿ ಮಾಡಿದ್ದಾರೆ. `ಶವ ಸಂಸ್ಕಾರದ ವಿಧಿವಿಧಾನ ಅವಧಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ದೌರ್ಜನ್ಯದ ವಿರುದ್ಧ ಜನ ಜಾಗೃತಿನಡೆಯಬೇಕು’ ಎಂದು ಅವರು ಹೇಳಿದ್ದಾರೆ.
`ಹೆಣ್ಣು ಮದುವೆ ಆದ ನಂತರ ಸಂಸಾರದಲ್ಲಿ ಸಿಲುಕಿ ಸಂಪ್ರದಾಯದoತೆ ಬದುಕುತ್ತಾರೆ. ತವರುಮನೆ ಬಿಟ್ಟು ಬರುವ ಹೆಣ್ಣು ಮಕ್ಕಳು ಭಾವನಾತ್ಮಕವಾಗಿರಲಿದ್ದು, ಹೊಸ ಕುಟುಂಬದ ಜೊತೆ ಸಂತೋಷದಿoದ ಬದುಕಲು ಪ್ರಯತ್ನಿಸುತ್ತಾರೆ. ಹೀಗಿರುವಾಗ ಪತಿ ಸಾವನಪ್ಪಿದರೆ ಕುಟುಂಬದವರ ಜೊತೆ ಆ ಮಹಿಳೆಯೂ ನೋವು ಅನುಭವಿಸುತ್ತಿದ್ದು, ಶವದ ಮುಂದೆ ದುಃಖಿಸುತ್ತಿರುವ ಆ ಮಹಿಳೆಗೆ ಇನ್ನಷ್ಟು ಹಿಂಸೆ ನೀಡಲಾಗುತ್ತಿದೆ. ಈ ಪದ್ಧತಿ ದೂರವಾಗಬೇಕು’ ಎಂದು ಮಾಧವ ನಾಯಕ ಅವರು ಹೇಳಿದ್ದಾರೆ.
`ಶವ ಸಂಸ್ಕಾರಕ್ಕೆ ಬಂದ ಪುರುಷರು ಆ ಮಹಿಳೆಯ ಮುಡಿಯಲ್ಲಿದ್ದ ಹೂವು ಹರಿದು ಹಾಕುತ್ತಾರೆ. ಅದೇ ಹೂವಿನಿಂದ ಹಣೆಯಲ್ಲಿದ್ದ ಕುಂಕುಮ ಅಳಿಸುತ್ತಾರೆ. ಆ ಮಹಿಳೆಯ ಕೈಯಲ್ಲಿದ್ದ ಬಳೆಗಳನ್ನು ಒಡೆಯುತ್ತಾರೆ. ಕಾಲುಂಗರ, ಮಂಗಲಸೂತ್ರವನ್ನು ತೆಗೆಯುತ್ತಾರೆ. ಇದೆಲ್ಲವೂ ಅನಿಷ್ಠ ಪದ್ಧತಿ’ ಎಂದವರು ಪ್ರತಿಪಾದಿಸಿದ್ದಾರೆ. `ಮಹಿಳೆ ಬಾಲ್ಯದಿಂದಲೂ ಬಳೆ, ಕುಂಕುಮ, ಹೂವಿನ ಜೊತೆ ಬದುಕುತ್ತಿದ್ದು ಅದನ್ನು ಕಿತ್ತೆಸೆಯುವುದು ಸಂಪ್ರದಾಯ ಅಲ್ಲ. ಯಾವ ಧರ್ಮಶಾಸ್ರ್ತ, ಪುರಾಣದಲ್ಲಿಯೂ ಈ ಬಗೆಯ ದೌರ್ಜನ್ಯ ಎಸಗುವ ಬಗ್ಗೆ ಉಲ್ಲೇಖಿಸಿಲ್ಲ. ಹೀಗಾಗಿ ಈ ಅನಿಷ್ಟ ಪದ್ಧತಿ ಹೋಗಲಾಡಿಸಬೇಕು’ ಎಂದವರು ಆಗ್ರಹಿಸಿದ್ದಾರೆ.
ಜನಶಕ್ತಿ ವೇದಿಕೆಯ ಸದಸ್ಯರಾದ ಸುರೇಶ ನಾಯ್ಕ, ಸೂರಜ ಕೂರ್ಮಕರ್, ಸತೀಶ ಬೆಳ್ಳೂರಕರ್, ರಾಮಾ ನಾಯ್ಕ, ಬಾಬು ಶೇಖ್ ಮೊದಲಾದವರು ಇಂಥ ಕೃತ್ಯವನ್ನು ಖಂಡಿಸಿದ್ದು, ಜನ ಜಾಗೃತಿಗಾಗಿ ಒತ್ತಾಯಿಸಿದ್ದಾರೆ.
