ಜೊಯಿಡಾದಲ್ಲಿ ಗಣಪತಿ ವಿಸರ್ಜನೆಗೂ ಮುನ್ನ ದೇವಾಲಯದಲ್ಲಿ ಪೂಜೆ ಸಲ್ಲಿಸುವ ವಿಷಯವಾಗಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ಎರಡು ಗುಂಪಿನವರಿಗೆ ಗಾಯವಾಗಿದ್ದು, ರಾಜಿ-ಸಂದಾನದಲ್ಲಿ ಮುಗಿಯಬೇಕಿದ್ದ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಜೊಯಿಡಾದ ವೈಜಗಾಂವ್ನ ಪ್ರತಿಜ್ಞಾ ಸಾವಂತ್ ಅವರು ದೂರಿದ ಪ್ರಕಾರ ಅವರ ಕುಟುಂಬ ಸದಸ್ಯರ ಮೇಲೆ ಪ್ರದೀಪ ಹೆರೇಕರ್ ಹಾಗೂ ಉಳಿದ 13 ಜನ ಹಲ್ಲೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಕಾಶ ಪೆಡ್ನೇಕರ್ ಅವರು ದೂರಿದ ಪ್ರಕಾರ ಪ್ರಕಾಶ ಪೆಡ್ನೇಕರ್ ಅವರ ಆಪ್ತರ ಮೇಲೆಯೂ ವಾಸುದೇವ್ ಸಾವಂತ ಅವರ ಜೊತೆ ಸೇರಿ 10 ಜನ ಹಲ್ಲೆ ಮಾಡಿದ್ದಾರೆ. ಈ ಎರಡು ಕಡೆಯವರ ಅಳಲು ಆಲಿಸಿದ ರಾಮನಗರ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.
ಪ್ರತಿಜ್ಞಾ ಸಾವಂತ್ ಅವರ ಮನೆಯಲ್ಲಿ ಗಣಪತಿ ಕೂರಿಸಿದ್ದು, ಅಗಸ್ಟ 28ರ ರಾತ್ರಿ ಗಣಪತಿ ಮೂರ್ತಿ ವಿಸರ್ಜನೆ ನಡೆಯುತ್ತಿತ್ತು. ಅದಕ್ಕೂ ಮುನ್ನ ಮೂರ್ತಿ ವಿಸರ್ಜನೆಗೆ ತೆರಳುವ ಮಾರ್ಗದಲ್ಲಿ ಬರುವ ರಾಮಲಿಂಗೇಶ್ವರ ದೇವಾಲಯದಲ್ಲಿ ಆರತಿ ಮಾಡಲು ನಿರ್ಧರಿಸಲಾಗಿತ್ತು. ಪ್ರತಿಜ್ಞಾ ಸಾವಂತ ಅವರು ಆರತಿ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಪ್ರದೀಪ ಹರೇಕರ್ ಅವರು ಪ್ರತಿಜ್ಞಾ ಅವರ ಕುಟುಂಬದವರನ್ನು ಹೊರಗೆ ಕರೆದರು. ಪ್ರತಿಜ್ಞಾ ಅವರ ಜೊತೆಗಿದ್ದ ಸಂಜಯ ಸಾವಂತ ಅವರನ್ನು ರಸ್ತೆಗೆ ಎಳೆದುಕೊಂಡು ಹೋಗಿ `ನಮ್ಮ ದೇವಸ್ಥಾನಕ್ಕೆ ಬಂದು ಪೂಜೆ ಮಾಡುವಿರಾ?’ ಎಂದು ಬೆದರಿಸಿದರು. ಆಗ, ಪ್ರದೀಪ ಹೇರೆಕರ್ ಅವರ ಜೊತೆಗಿದ್ದ ಜೊಯಿಡಾದ ಸಂಭಾಜಿ ನಾರ್ವೇಕರ್, ಸಂಭಾಜಿ ಕೋಟಿಮಕರ್, ರವಿಕಾಂತ ಪೆಡ್ನೇಕರ್, ಪ್ರಕಾಶ ಪೆಡ್ನೇಕರ್, ಪ್ರವೀಣ ಪೆಡ್ನೇಕರ್, ಸಂದೀಪ ಹರೇಕರ್ ಅವರು ಜೊತೆಗಿದ್ದ ಸಂಜಯ ಸಾವಂತ ಅವರಿಗೆ ಹೊಡೆಯಲು ಶುರು ಮಾಡಿದರು.
ಪ್ರತಿಜ್ಞಾ ಸಾವಂತ ಅವರ ಪತಿ ಪ್ರೇಮಾನಂದ ಸಾವಂತ ಅವರು ಈ ಹೊಡೆದಾಟ ತಪ್ಪಿಸುವ ಪ್ರಯತ್ನ ಮಾಡಿದರು. ಆಗ, ಪ್ರದೀಪ ಹರೇಕರ್ ಅವರ ಜೊತೆ ಬಂದಿದ್ದ ಮಹಾಬಳೇಶ್ವರ ಹರೇಕರ್, ಸಂಜಯ ನಾರ್ವೇಕರ್, ದೀಪಕ ನಾರ್ವೇಕರ್, ಕಲ್ಲಪ್ಪ ಪೆಡ್ನಕರ್, ವಿನೋದ ಗಾವಡೆ, ಸುನೀಲ ಪೆಡ್ನೇಕರ್ ಹಾಗೂ ಶಿವಾಜಿ ನಾರ್ವೇಕರ್ ಸಹ ಹೊಡೆದಾಟ ಶುರು ಮಾಡಿದರು. ಪ್ರತಿಜ್ಞಾ ಸಾವಂತ ಅವರ ಜೊತೆ ಪೂಜೆಗೆ ಬಂದಿದ್ದ ವಾಸುದೇವ ಸಾವಂತ, ಬಾಬುರಾವ ಸಾವಂತ, ಸುಧಾಕರ ಸಾವಂತ, ಬಾಲಕೃಷ್ಣ ಸಾವಂತ ಅವರು ಈ ಹೊಡೆದಾಟದಲ್ಲಿ ಪೆಟ್ಟು ತಿಂದರು. ಕೊನೆಗೆ `ಈ ದೇವಾಲಯಕ್ಕೆ ಕಾಲಿಟ್ಟರೆ ಜೀವಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ’ ಎಂದು ಪ್ರತಿಜ್ಞಾ ಸಾವಂತ ಅವರು ದೂರಿದ್ದಾರೆ.
ಇದಕ್ಕೆ ಪ್ರತಿಯಾಗಿ ಪ್ರಕಾಶ ಪೆಡ್ನೇಕರ್ ಅವರು `ವಾಸುದೇವ ಸಾವಂತ ಹಾಗೂ ಪ್ರೇಮಾನಂದ ಸಾವಂತ ಅವರು ದೇವಸ್ಥಾನದ ಕೀಲಿ ಕೊಡುವಂತೆ ಕೇಳಿದ್ದು, ಅದನ್ನು ದೇಗುಲ ಪೂಜಾರಿ ಅವರಿಂದಪಡೆಯುವoತೆ ತಿಳಿಸಿದಾಗ ಹೊಡೆದಾಟ ಶುರುವಾಯಿತು. ವಾಸುದೇವ ಸಾವಂತ ಅವರು ನನ್ನ ಕೆನ್ನೆಗೆ ಬಾರಿಸಿದರು’ ಎಂದು ವಿವರಿಸಿದ್ದಾರೆ. ಆಗ ತನ್ನ ಸಂಬoಧಿಕರಾದ ಆದರ್ಶ ಪೆಡ್ನೇಕರ್, ಕಲ್ಲಪ್ಪ ಪೆಡ್ನೇಕರ್, ರವಿಕಾಂತ ಪೆಡ್ನೆಕರ್, ಸುನೀಲ ಪೆಡ್ನೇಕರ್, ಮಹಾಬಳೇಶ್ವರ ಹಿರೇಕರ್, ಪ್ರವೀಣ ಪೆಡ್ನೇಕರ್, ಸಂಜಯ ನಾರ್ವೇಕರ್, ಸಂಭಾಜಿ ನಾರ್ವೇಕರ್, ಚಂದ್ರಕಾAತ ಸಾವಂತ, ಆನಂದಿ ಹಿರೇಕರ್, ಜಿಜೀಬಾಯಿ ಕೋಟಿಮಕರ್ ಸೇರಿ ವಾಸುದೇವ ಸಾವಂತ ಅವರಿಗೆ ಬುದ್ದಿ ಹೇಳಿದರು. ಇದನ್ನು ಸಹಿಸದ ವಾಸುದೇವ ಸಾವಂತ ಅವರ ಜೊತೆ ಪ್ರೇಮಾನಂದ ಸಾವಂತ, ಸಂಜಯ ಸಾವಂತ, ಸುಧಾಕರ ಸಾವಂತ, ಬಾಳಕೃಷ್ಣ ಸಾವಂತ, ವಿಲಾಸ ಸಾವಂತ, ಬಾಬಾರಾವ್ ಸಾವಂತ, ಹರಿದಾಸ ಸಾವಂತ, ಹರೀಶ ಸಾವಂತ, ಕೇಶವ ಸಾವಂತ ಸೇರಿ ಹೊಡೆದಾಟ ಶುರು ಮಾಡಿದರು. ಇದರಲ್ಲಿ ಆನಂದಿ ಹೀರೆಕರ್ ಹಾಗೂ ಜೀಜಿಬಾಯಿ ಕೋಟಿಮಕರ್ ಅವರಿಗೆ ಪೆಟ್ಟಾಗಿದೆ’ ಎಂದು ಪ್ರಕಾಶ ಪೆಡ್ನೇಕರ್ ವಿವರಿಸಿದ್ದಾರೆ. ಶಾಂತಿಯಿoದ ನಡೆಯಬೇಕಿದ್ದ ಗಣೇಶ ಉತ್ಸವದಲ್ಲಿ ನಡೆದ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ.
