`ಭಟ್ಕಳದ ಹಳೆ ಬಸ್ ನಿಲ್ದಾಣದ ಮೀನು ಮಾರುಕಟ್ಟೆಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡುವುದಿಲ್ಲ’ ಎಂದು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. `ಹಳೆ ಮೀನು ಮಾರುಕಟ್ಟೆ ಸ್ಥಳಾಂತರ ವಿಷಯದಲ್ಲಿ ವದಂತಿ ಹಬ್ಬಿದ್ದು, ಮೀನು ಮಾರಾಟ ಮಾಡುವ ಮಹಿಳೆಯರಿಗೆ ತಪ್ಪು ಮಾಹಿತಿ ನೀಡಲಾಗಿದೆ’ ಎಂದವರು ವಿಷಾಧವ್ಯಕ್ತಪಡಿಸಿದರು.
ಮೀನು ಮಾರಾಟಗಾರರನ್ನು ಭೇಟಿ ಮಾಡಿದ ಅವರು `ಕೆಲ ದಿನದ ಹಿಂದೆ ಕಿಡಿಕೇಡಿಗಳು ರಾಜಕೀಯ ಹಿತಾಸಕ್ತಿ ಕಾರಣದಿಂದ ಈ ವದಂತಿ ಹಬ್ಬಿಸಿದ್ದಾರೆ. ಈ ಹಿನ್ನಲೆ ಮೀನುಗಾರರು ಆತಂಕಕ್ಕೆ ಒಳಗಾಗಿದ್ದು, ಮೀನುಗಾರ ಸಂಘಟನೆಯವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ, ಮೀನು ಮಾರುಕಟ್ಟೆ ಸ್ಥಳಾಂತರ ನಮ್ಮ ಮುಂದಿಲ್ಲ’ ಎಂದು ಮಂಕಾಳು ವೈದ್ಯ ವಿವರಿಸಿದ್ದಾರೆ.
`ನಾನು ಮೀನುಗಾರರ ಪರವಾಗಿದ್ದೇನೆ. ಮೀನುಗಾರರಿಗೆ ಸೌಲಭ್ಯ ಕೊಡಿಸುವ ಕೆಲಸವನ್ನು ಮಾಡುತ್ತೇನೆ. ಮೀನುಗಾರರು ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಆಕಸ್ಮಿಕ ಮರಣ ಹೊಂದಿದರೆ ಅಂತಹವರ ಕುಟುಂಬಕ್ಕೆ 10 ಲಕ್ಷ ಪರಿಹಾರ ಕೊಡಿಸುತ್ತಿದ್ದೇನೆ. ಹೀಗಿರುವಾಗ ಮೀನುಗಾರರು ಅಪಪ್ರಚಾರಕ್ಕೆ ಕಿವಿಕೊಡಬೇಡಿ’ ಎಂದು ಮನವಿ ಮಾಡಿದರು.
