ಮುಂಡಗೋಡಿದ ಸನವಳ್ಳಿ ಗಡಿಭಾಗದಲ್ಲಿ 30ಕ್ಕೂ ಅಧಿಕ ಸಾಗವಾನಿ ಗಿಡಗಳನ್ನು ಕಡಿಯಲಾಗಿದೆ. ಇನ್ನೂ ಬೆಳವಣಿಗೆ ಹಂತದಲ್ಲಿದ್ದ ಗಿಡಗಳನ್ನು ಕಟಾವು ಮಾಡಿ ಅಲ್ಲಿಯೇ ರಾಶಿ ಹಾಕಲಾಗಿದೆ.
ಮುಂಡಗೋಡಿನ ಅಜ್ಜಳ್ಳಿ ಬೀಟ್ ಮತ್ತು ಜೋಗೇಶ್ವರಹಳ್ಳ ಗೌಳಿದಡ್ಡಿ ಬೀಟ್ ವ್ಯಾಪ್ತಿಯಲ್ಲಿ ಹಲವು ಸಾಗವಾನಿ ಗಿಡ ಕಡಿದಿರುವುದನ್ನು ಜನ ನೋಡಿದ್ದಾರೆ. ಅದಾದ ನಂತರ ಅರಣ್ಯ ಇಲಾಖೆಗೂ ಅಲ್ಲಿನವರು ಮಾಹಿತಿ ನೀಡಿದ್ದಾರೆ. ಈಗಾಗಲೇ ಅನೇಕ ಸಾಗವಾನಿ ಮರಗಳನ್ನು ಇಲ್ಲಿಂದ ಸಾಗಿಸಿದ ಬಗ್ಗೆ ಜನ ದೂರಿದ್ದಾರೆ.
ಮರ ಕಡಿತ ಹಾಗೂ ಸಾಗಾಟಕ್ಕೆ ಸಾಕ್ಷಿಯಾಗಿ ಮರದ ಬುಡಗಳು ಅಲ್ಲಿವೆ. ಅರಣ್ಯ ಸಿಬ್ಬಂದಿ ನಿರ್ಲಕ್ಷದ ಕಾರಣದಿಂದಲೂ ಈ ಮರಗಳ್ಳತನ ನಡೆದ ಬಗ್ಗೆ ಆರೋಪವಿದೆ. ಅರಣ್ಯ ಸಿಬ್ಬಂದಿ ಸರಿಯಾಗಿ ಗಸ್ತು ತಿರುಗಿದರೆ ಈ ಬಾಳಿ ಬದುಕಬೇಕಿದ್ದ ಮರಗಳು ಕಳ್ಳತನವಾಗುತ್ತಿರಲಿಲ್ಲ ಎಂದು ಅಲ್ಲಿನವರು ಹೇಳಿದ್ದಾರೆ.
`ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಸಾಗವಾನಿ ಗಿಡ ಕಡಿದವರನ್ನು ಪತ್ತೆ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಅಲ್ಲಿನ ನಾಗರಾಜ ಗುಬ್ಬಕ್ಕನವರ್, ಸುರೇಶ್ ಕೆರಿಹೊಲದವರ, ಮಂಜು ಕೋಣನಕೇರಿ ಒತ್ತಾಯಿಸಿದರು.
