ಆರೋಗ್ಯ, ಸಂಸ್ಕೃತಿ ಹಾಗೂ ಕಾನೂನಿಗೆ ಮಾರಕವಾದ ಡಿಜೆ ಬಳಕೆ ನಿಷೇಧಿಸಿ ಸರ್ಕಾರ ಆದೇಶಿಸಿದ್ದರೂ ಯಲ್ಲಾಪುರದ ಅರಣ್ಯ ಇಲಾಖೆ ಈ ನಿಯಮ ಪಾಲಿಸಿಲ್ಲ. ಗಣೇಶ ಮೂರ್ತಿ ವಿಸರ್ಜನೆ ವೇಳೆ ಅರಣ್ಯ ಇಲಾಖೆಯವರು ಡಿಜೆ ತರಿಸಿದ್ದು, ಅದನ್ನು ಬಳಸದಂತೆ ಪೊಲೀಸರು ಎಚ್ಚರಿಕೆ ನೀಡಿದರೂ ದೊಡ್ಡದಾಗಿ ಧ್ವನಿವರ್ಧಕ ಬಳಸಿ ಶಬ್ದ ಮಾಲಿನ್ಯ ಮಾಡಲಾಗಿದೆ. ಗಣೇಶ ಮೂರ್ತಿ ಮುಂದೆ ಚಿತ್ರಗೀತೆಗಳನ್ನು ಪ್ರಸಾರ ಮಾಡಿದ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ತಮ್ಮ ಮಕ್ಕಳನ್ನು ಅಲ್ಲಿ ಕುಣಿಯಲು ಬಿಟ್ಟು ತಾವು ಬೆಳೆದುಬಂದ ಸಂಸ್ಕೃತಿ ಪರಿಚಯಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾಡಳಿತ ಪೊಲೀಸರ ಸಹಕಾರದಲ್ಲಿ ಎಲ್ಲಡೆ ಡಿಜೆ ಬಳಸದಂತೆ ಮನವಿ ಮಾಡಿದೆ. ಡಿಜೆ ಬಳಸದೇ ಸಾಂಪ್ರದಾಯಿಕವಾಗಿ ಗಣೇಶ ಹಬ್ಬ ಆಚರಿಸಿದವರನ್ನು ಪೊಲೀಸರು ಅಭಿನಂದಿಸುತ್ತಿದ್ದಾರೆ. ಈ ವರ್ಷ ಎಲ್ಲಾ ಗಣೇಶ ಉತ್ಸವ ಸಮಿತಿಯವರು ಶಂಖ, ಜಮಟೆ, ಚಂಡೆ ವಾದನಗಳಿಂದ ಗಣೇಶ ಉತ್ಸವ ಆಚರಿಸಿದರೆ ಯಲ್ಲಾಪುರದ ಅರಣ್ಯ ಇಲಾಖೆ ಮಾತ್ರ ಇಲ್ಲಿನ ಸಂಸ್ಕೃತಿಗೆ ವಿರುದ್ಧವಾಗಿ ಹಬ್ಬ ಆಚರಿಸಿದೆ. ಗಣೇಶ ಹಬ್ಬದ ಹೆಸರಿನಲ್ಲಿ ದೊಡ್ಡದಾಗಿ ಚಿತ್ರಗೀತೆಗಳನ್ನು ಪ್ರಸಾರ ಮಾಡಿದ ಇಲ್ಲಿನ ಉತ್ಸವ ಸಮಿತಿಯವರು ತಮ್ಮೊಂದಿಗೆ ತಮ್ಮ ಕುಟುಂಬ ಸದಸ್ಯರನ್ನು ಸಹ ಕುಣಿಸಿದ್ದಾರೆ. ಅರಣ್ಯ ಇಲಾಖೆ ಆವಾರದ ಜೊತೆ ಯಲ್ಲಾಪುರ ಪೇಟೆಯಲ್ಲಿಯೂ ತಮ್ಮ ಕುಣಿತದ ಮೆರವಣಿಗೆ ನಡೆಸಿ ಅಬ್ಬರದಿಂದ ಶಬ್ದ ಮಾಲಿನ್ಯ ನಡೆಸಿ ಪರಿಸರ ರಕ್ಷಣೆಯ ಸಂದೇಶ ಸಾರಿದ್ದಾರೆ!
ಯಲ್ಲಾಪುರದ ಅರಣ್ಯ ಇಲಾಖೆಯ ಆವಾರದಲ್ಲಿ ಪ್ರತಿ ವರ್ಷ ಗಣೇಶ ಚತುರ್ಥಿ ವೇಳೆ 5 ದಿನ ಉತ್ಸವ ನಡೆಸಲಾಗುತ್ತದೆ. ಪರಿಸರ ಸಂದೇಶದ ವಿವರಣೆಗಳನ್ನು ನೀಡುವ ರೀತಿ ಗಣೇಶನ ಮೂರ್ತಿ ರಚಿಸಲಾಗುತ್ತದೆ. ಕೊನೆಯ ದಿನ ಮೂರ್ತಿ ವಿಸರ್ಜನೆ ನಡೆಸಲಾಗುತ್ತಿದ್ದು, ಎಲ್ಲರಿಗೂ ಮಾದರಿ ಆಗಬೇಕಿದ್ದ ಅರಣ್ಯ ಇಲಾಖೆ ಈ ಬಾರಿ ಗಣೇಶನ ವಿಸರ್ಜನೆ ಜೊತೆ ತಮ್ಮ ಇಲಾಖೆಯ ತತ್ವ ಸಿದ್ಧಾಂತವನ್ನು ವಿಸರ್ಜಿಸಿದೆ. ಗಣೇಶನ ಮೂರ್ತಿ ಎದುರು `ಯಾರೆ ನೀನು ರೋಜಾ ಹೂವೆ, ಮಸ್ತ್ ಮಸ್ತ್ ಹುಡುಗಿ ಬಂದ್ಲು, ಬ್ಯಾಂಗಲ್ ಬಂಗಾರಿ’ ಸೇರಿ ಗಣೇಶನಿಗೆ ಸಂಬoಧವೇ ಇಲ್ಲದ ಹಾಡು ಕೇಳಿ ಬಂದಿದ್ದು, ಆ ಸದ್ದಿಗೆ ಮೆರವಣಿಗೆ ನೋಡುತ್ತಿದ್ದ ಸಾರ್ವಜನಿಕರ ಎದೆ ಡವ ಡವ ಎನ್ನುತ್ತಿದ್ದವು. ಇದರ ವಿಡಿಯೋ ಸಹ ವೈರಲ್ ಆಗಿದ್ದು, ವಿಡಿಯೋದಲ್ಲಿ ಡಿಜೆ ಸ್ಪೀಕರ್ ಬಳಕೆಯೂ ಸ್ಪಷ್ಟವಾಗಿ ಕಾಣುತ್ತಿದೆ.
`ಅರಣ್ಯ ಇಲಾಖೆಯವರು ಡಿಜೆ ತರಿಸಿದ್ದರು. ನಾವು ಪರಿಶೀಲನೆ ನಡೆಸಿ ಡಿಜೆಯ ಬೇಸ್ ತೆಗಿಸಿದ್ದೇವೆ’ ಎಂದು ಪಿಐ ರಮೇಶ ಹಾನಾಪುರ ಅವರು ತಿಳಿಸಿದರು. `ಉತ್ಸವದ ವೇಳೆ ತಾನು ಇರಲಿಲ್ಲ. ಡಿಜೆ ಬಳಕೆ ಬಗ್ಗೆ ವಿಚಾರಣೆ ನಡೆಸುವೆ’ ಎಂದು ಯಲ್ಲಾಪುರ ಡಿಎಫ್ಓ ಹರ್ಷಭಾನು ತಿಳಿಸಿದರು.
ಅರಣ್ಯ ಇಲಾಖೆಯವರ ಗಣೇಶ ವಿಸರ್ಜನೆ ಹೇಗಿತ್ತು? ವಿಡಿಯೋ ಇಲ್ಲಿ ನೋಡಿ..
