ಅಂಕೋಲಾದ ಹಿಚಕಡದ ಶಾಲಾ ಶಿಕ್ಷಕ ಶೇಖರ ಗಾಂವಕಾರ್ ಅವರು ಮಕ್ಕಳ ಜೊತೆ ಅನುಚಿತವಾಗಿ ವರ್ತಿಸಿದ ಆರೋಪ ಎದುರಿಸುತ್ತಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಶಿಕ್ಷಕನ ಮೇಲೆ ಬಂದ ಗಂಭೀರ ಆರೋಪಕ್ಕೆ ಶಿಕ್ಷಣ ಇಲಾಖೆಯವರೇ ನಡೆಸಿದ ತನಿಖೆಯಲ್ಲಿ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಹೀಗಾಗಿ ಈ ಬಗ್ಗೆ ಪೊಲೀಸ್ ವಿಚಾರಣೆ ನಡೆಯಬೇಕು ಎಂಬ ಆಗ್ರಹವೂ ಕೇಳಿ ಬರುತ್ತಿದೆ.
ಅಹಿತಕರ ಘಟನೆಯೊಂದು ನಡೆದ ಬಗ್ಗೆ ಶಿಕ್ಷಣಾಧಿಕಾರಿಗಳಿಗೆ ಫೋನ್ ಕರೆಯೊಂದು ಬಂದಿತ್ತು. ಅದರ ಪ್ರಕಾರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದರು. ಫೋನ್ ಮಾಡಿದವರು ಎಲ್ಲಿಯೂ ಶಿಕ್ಷಕ ಶೇಖರ ಗಾಂವಕಾರ್ ಅವರ ಹೆಸರು ಹೇಳಿರಲಿಲ್ಲ. ಶಾಲೆಯಲ್ಲಿ ನಡೆದ ಅಹಿತಕರ ಘಟನೆಯನ್ನು ಮಾತ್ರ ಅವರು ವಿವರಿಸಿದ್ದು, ಶಾಲಾ ಮುಖ್ಯಾಧ್ಯಾಪಕರೇ ನೀಡಿದ ಪತ್ರದಲ್ಲಿ `ಶೇಖರ ಗಾಂವ್ಕರ್ ಅವರು ತಪ್ಪು ಮಾಡಿಲ್ಲ’ ಎಂದು ಬರೆದುಕೊಟ್ಟರು. ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ರಾಯ್ಕರ ಅವರು ತಮ್ಮೊಡನೆ ಬಿಆರ್ಸಿ ಸಮನ್ವಯಾಧಿಕಾರಿ ದೇವರಾಯ ನಾಯಕ ಹಾಗೂ ಹಿಚಕಡ ಕ್ಲಸ್ಟರಿನ ಸಿಆರ್ಪಿ ಶಾಂಬಾ ಗೌಡ ಅವರನ್ನು ಶಾಲೆಗೆ ಕರೆದೊಯ್ದು ಅಲ್ಲಿ ವಿಚಾರಣೆ ನಡೆಸಿದರು. ಆದರೆ, `ಈ ವೇಳೆ ಅಂಥ ಘಟನೆ ನಡೆದಿಲ್ಲ’ ಎಂದು ಶಾಲೆಯ ಮುಖ್ಯ ಶಿಕ್ಷಕರಾದ ವೆಂಕಮ್ಮ ಆಗೇರ ಅವರು ಮೊದಲ ಮಾತಿನಲ್ಲಿಯೇ ಮೇಲಧಿಕಾರಿಗಳಿಗೆ ತಿಳಿಸಿದರು. ಅದೇ ಆಧಾರದಲ್ಲಿ ತನಿಖೆಗೆ ಬಂದವರು ಪ್ರಕರಣ ಮುಗಿಸಿದರು. ತನಿಖೆಗೆ ಬಂದ ಮೇಲಾಧಿಕಾರಿಗಳು ಮೂವರು ಪುರುಷರಾಗಿದ್ದು, ಅಂಥ ವಿಷಯದಲ್ಲಿ ವಿದ್ಯಾರ್ಥಿನಿಯರ ಮಾತನಾಡಿಸುವ ಅಧಿಕಾರವಿಲ್ಲದಿದ್ದರೂ ಆ ಪ್ರಕರಣವನ್ನು ಅಲ್ಲಿಗೆ ಮುಗಿಸಿದರು.
`ಮಕ್ಕಳ ವಿಷಯದಲ್ಲಿ ಆರೋಪ ಬಂದಾಗ ಅದಕ್ಕೆ ತನಿಖೆ ನಡೆಸುವ ವಿಧಾನವೇ ಬೇರೆ. ಆದರೆ, ಆ ವಿಧಾನವನ್ನು ಇಲ್ಲಿ ಪಾಲಿಸಲಿಲ್ಲ. ಮಕ್ಕಳನ್ನು ಆಪ್ತ ಸಮಾಲೋಚನೆಗೆ ಒಳಪಡಿಸುವ ಕೆಲಸ ನಡೆಯಲಿಲ್ಲ. ಆಪ್ತ ಸಮಾಲೋಚನೆ ನಡೆಸುವವರು ಸಹ ತನಿಖಾ ತಂಡದಲ್ಲಿರಲಿಲ್ಲ. ಹೀಗಾಗಿ ಈ ತನಿಖೆಯಲ್ಲಿ ಸತ್ಯ ಹೊರ ಬರಲಿಲ್ಲ’ ಎಂಬುದು ಕೆಲವರ ಅನಿಸಿಕೆ. ಶಿಕ್ಷಕ ಶೇಖರ್ ಗಾಂವಕಾರ್ ಅವರ ವಿರುದ್ಧ ಈ ಹಿಂದೆ ಸಹ ಇಂಥ ಆರೋಪ ಕೇಳಿ ಬಂದಿದ್ದವು. ಆದರೆ, ಆ ವೇಳೆ ಸಹ ಅದು ದೊಡ್ಡ ವಿಷಯವಾಗಿರಲಿಲ್ಲ. `ಈ ಹಿಂದಿನ ಆರೋಪಗಳ ಬಗ್ಗೆ ತಮಗೆ ಮಾಹಿತಿಯೇ ಇಲ್ಲ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದರು. `ದೂರು ಬಂದ ನಂತರ ಸ್ಥಳಕ್ಕೆ ಭೇಟಿ ನೀಡಿದ್ದು, ಮುಖ್ಯಾಧ್ಯಾಪಕರು ಸಹ ಅಂಥ ಯಾವುದೇ ಘಟನೆ ನಡೆದಿಲ್ಲ ಎಂದಿದ್ದಾರೆ’ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ರಾಯ್ಕರ ತಿಳಿಸಿದರು.
ಇನ್ನೂ, ಶಾಲೆಯಲ್ಲಿ ನಡೆದ ಅಹಿತಕರ ಘಟನೆ ನಡೆದ ಬಗ್ಗೆ ಮೇಲಧಿಕಾರಿಗಳಿಗೆ ದೂರು ಹೋಗಿದ್ದರೂ ಆ ವಿಷಯ ಶಾಲಾ ಅಭಿವೃದ್ಧಿ ಸಮಿತಿಯವರಿಗೆ ಗೊತ್ತಿರಲಿಲ್ಲ. ಮೇಲಧಿಕಾರಿಗಳು ತನಿಖೆಗೆ ಬರುವ ವಿಷಯವನ್ನು ಸಹ ಶಾಲಾ ಅಭಿವೃದ್ಧಿ ಸಮಿತಿಯವರಿಗೆ ತಿಳಿಸಿರಲಿಲ್ಲ. ಹೀಗಾಗಿ ಈ ಪ್ರಕರಣವನ್ನು ಇಲಾಖೆ ಹಂತದಲ್ಲಿಯೇ ಮುಚ್ಚಿ ಹಾಕುವ ಪ್ರಯತ್ನ ನಡೆದಿರುವ ಬಗ್ಗೆಯೂ ಅನೇಕರಿಗೆ ಅನುಮಾನವ್ಯಕ್ತವಾಗಿದೆ.
ಪ್ರಕರಣದ ಬಗ್ಗೆ ಅಧಿಕೃತ ದೂರು ನೀಡಲು ಮಕ್ಕಳು ಹೆದರುತ್ತಿರುವ ಕಾರಣ ಈ ಬಗ್ಗೆ ಲಿಖಿತ ದೂರು ಸಲ್ಲಿಕೆಯಾಗಿಲ್ಲ. ಇಂಥ ವಿಷಯಗಳ ಬಗ್ಗೆ ಮಕ್ಕಳು ಮನೆಯಲ್ಲಿ ಹೇಳದ ಕಾರಣ ಪಾಲಕರಿಗೆ ಆ ಬಗ್ಗೆ ಮಾಹಿತಿಯೇ ಇಲ್ಲ. `ಶಾಲೆಯಲ್ಲಿ ಇನ್ನಿತರ ಶಿಕ್ಷಕರಿದ್ದರೂ ಅವರ ಮೇಲೆ ಯಾವುದೇ ಆರೋಪ ಇಲ್ಲ. ಈ ಶಿಕ್ಷಕರನ್ನೇ ಗುರಿಯಾಗಿರಿಸಿಕೊಂಡು ಆರೋಪ ಬಂದದ್ದಾದರೂ ಹೇಗೆ? ಬೆಂಕಿ ಇಲ್ಲದೇ ಹೊಗೆ ಆಡಲು ಅಸಾಧ್ಯ’ ಎನ್ನುವವರು ಇದ್ದಾರೆ. ಹೀಗಾಗಿ `ಮಕ್ಕಳ ರಕ್ಷಣಾ ಘಟಕದವರು ಹಾಗೂ ಪೊಲೀಸರು ಸ್ವಯಂ ಪ್ರೇರಿತರಾಗಿ ಈ ಪ್ರಕರಣ ಗಮನಿಸಬೇಕು. ಮಕ್ಕಳ ಆಪ್ತ ಸಮಾಲೋಚನೆ ಜೊತೆ ಪೊಲೀಸ್ ವಿಚಾರಣೆ ನಡೆದರೆ ನಿಜವಾಗಿಯೂ ನಡೆದಿದ್ದೇನು? ಎಂದು ಗೊತ್ತಾಗಲಿದೆ’ ಎಂಬುದು ಅನೇಕರ ಅಭಿಪ್ರಾಯ.
