ಧರ್ಮಸ್ಥಳದಲ್ಲಿ ನಡೆಯುವ ಜನಜಾಗೃತಿ ಸಭೆಯಲ್ಲಿ ಭಾಗವಹಿಸಲು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆಸಕ್ತಿ ತೋರಿದ್ದಾರೆ. ಧರ್ಮಸ್ಥಳಕ್ಕೆ ತೆರಳುವ ದಾರಿ ಮದ್ಯೆ ಅಂಕೋಲಾದಲ್ಲಿ ವಿಶ್ರಾಂತಿಪಡೆದ ಅವರು `ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರವಾಗಿರುವ ಧರ್ಮಸ್ಥಳದ ವಿರುದ್ಧ ರಾಜ್ಯ ಸರ್ಕಾರ ಕುತಂತ್ರ ಮಾಡುತ್ತಿದೆ’ ಎಂದು ದೂರಿದ್ದಾರೆ.
`ಧರ್ಮಸ್ಥಳದ ಖ್ಯಾತಿಗೆ ಧಕ್ಕೆ ತರಲು ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಭಕ್ತರ ಭಾವನೆ ಕೆದಕಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ’ ಎಂದವರು ಆರೋಪಿಸಿದ್ದಾರೆ. `ರಾಜ್ಯ ಸರ್ಕಾರದ ಈ ನೀತಿ ಖಂಡಿಸುವುದಕ್ಕಾಗಿ ನಾನೂ ಸಹ ಧರ್ಮಸ್ಥಳಕ್ಕೆ ಹೋಗುತ್ತಿದ್ದೇನೆ. ಅಲ್ಲಿನ ಜನಜಾಗೃತಿ ಸಭೆಯಲ್ಲಿ ಭಾಗವಹಿಸುವೆ’ ಎಂದವರು ಹೇಳಿದ್ದಾರೆ.
`ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಗಳನ್ನು ಒಡೆದು ಆಳುವ ನೀತಿ ಮಾಡುತ್ತಿದೆ. ಅನಾಮಿಕ ವ್ಯಕ್ತಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಧರ್ಮಸ್ಥಳ ಕೇಂದ್ರ ಮೇಲೆ ಎಸ್ ಐ ಟಿ ತನಿಖೆ ನಡೆಸಿದೆ. ಸುಳ್ಳು ಕೆಲಸಕ್ಕೆ ಇನ್ನಷ್ಟು ಪುಷ್ಟಿ ಕೊಟ್ಟು ತಾನೇ ಹಳ್ಳಕ್ಕೆ ಬಿದ್ದಿದೆ’ ಎಂದವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
`ಧರ್ಮಸ್ಥಳದಲ್ಲಿ 21 ಕಡೆ ಗುಂಡಿ ತೋಡಿದರೂ ಏನೂ ಸಿಕ್ಕಿಲ್ಲ. ತಲೆ ಬುರುಡೆ ರಹಸ್ಯ ಏನು? ಎಂದು ಎಲ್ಲರಿಗೂ ಗೊತ್ತಾಗಿದೆ. ಜೊತೆಗೆ ರಾಜ್ಯ ಸರ್ಕಾರದ ಹುನ್ನಾರವೂ ಬಯಲಿಗೆ ಬಂದಿದೆ’ ಎಂದವರು ಹೇಳಿದ್ದಾರೆ. `ಇವೆಲ್ಲವುಗಳ ನಡುವೆಯು ದಸರಾ ನಾಡಹಬ್ಬದಲ್ಲಿ ಬಾನು ಮುಸ್ತಾಕ್ ಅವರನ್ನು ಉದ್ಘಾಟನೆಗೆ ನಿಯೋಜಿಸಿರುವ ಕ್ರಮ ಹಿಂದು ಪರಂಪರೆಗೆ ಧಕ್ಕೆ ತರುವ ವಿಷಯ. ರಾಜ್ಯ ಸರ್ಕಾರದ ಕ್ರಮಗಳನ್ನು ನೋಡುತ್ತಿರುವ ಜನ ಸಾಮಾನ್ಯರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದವರು ಹೇಳಿದರು. ಬಿಜೆಪಿ ಪ್ರಮುಖರಾದ ಭಾಸ್ಕರ ನಾರ್ವೇಕರ, ಗಣಪತಿ ನಾಯ್ಕ ಹನುಮಟ್ಟಾ, ಲಕ್ಷ್ಮೀಕಾಂತ ನಾಯ್ಕ ಅವರ ಜೊತೆಗಿದ್ದರು.
