ಗ್ಯಾರಂಟಿ ನ್ಯೂಸ್’ನ ರಾಧಾ ಹಿರೇಗೌಡರ್ ಅವರಿಗೆ ಹೆರಿಗೆ ಮಾಡಿಸುವುದಾಗಿ ಹಳಿಯಾಳ ವಿಧಾನಸಭಾ ಕ್ಷೇತ್ರ ಶಾಸಕ ಆರ್ ವಿ ದೇಶಪಾಂಡೆ ಹೇಳಿದ್ದಾರೆ. ಇದರಿಂದ ರಾಧಾ ಹಿರೇಗೌಡರ್ ಅವರು ಸಿಡಿಮಿಡಿಗೊಂಡಿದ್ದು, ಆರ್ ವಿ ದೇಶಪಾಂಡೆ ಅವರ ವಿರುದ್ಧ ಕಿಡಿಕಾರಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು’ ಎಂಬ ಕೂಗು ಇಂದು-ನಿನ್ನೆಯದಲ್ಲ. ವಿವಿಧ ಮಾಧ್ಯಮಗಳ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಸಹ ಸುಸಜ್ಜಿತ ಆಸ್ಪತ್ರೆಯ ಹೋರಾಟ ನಡೆಯುತ್ತಿದೆ. ಆದರೆ, ಸುಸಜ್ಜಿತ ಆಸ್ಪತ್ರೆ ನಿರ್ಮಾಣ ರಾಜಕೀಯ ಹೋರಾಟ-ಕಚ್ಚಾಟಕ್ಕೆ ಮಾತ್ರ ಸೀಮಿತವಾಗಿದೆ. ಜನ ಎಷ್ಟೇ ಕಾಡಿಬೇಡಿದರೂ ಸುಸಜ್ಜಿತ ಆಸ್ಪತ್ರೆಯ ನಿರ್ಮಾಣದ ವಿಷಯ ಮಾತ್ರ ಸರ್ಕಾರಿ ದಾಖಲೆಗಳಲ್ಲಿ ಮುನ್ನಡೆ ಸಾಧಿಸುತ್ತಿಲ್ಲ. ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ಸುಸಜ್ಜಿತ ಆಸ್ಪತ್ರೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಈ ನಡುವೆ ನಿನ್ನೆ ತಮ್ಮ ತವರಿಗೆ ಬಂದಿದ್ದ ಪತ್ರಕರ್ತೆ ರಾಧಾ ಹಿರೇಗೌಡರ್ ಅವರು ಆರ್ ವಿ ದೇಶಪಾಂಡೆ ಅವರನ್ನು ಭೇಟಿ ಮಾಡಿದ್ದಾರೆ. ವಿವಿಧ ಮಾಧ್ಯಮದವರ ಎದುರಿನಲ್ಲಿ ರಾಧಾ ಹೀರೆಗೌಡರ್ ಅವರು ಆರ್ ವಿ ದೇಶಪಾಂಡೆ ಅವರ ಬಳಿ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದ ಬಗ್ಗೆ ಚರ್ಚಿಸಿದ್ದಾರೆ. `ಆಸ್ಪತ್ರೆ ನಿರ್ಮಾಣ ಯಾವಾಗ?’ ಎಂದು ಪ್ರಶ್ನಿಸಿದ್ದಾರೆ. ಆಗ, ಆರ್ ವಿ ದೇಶಪಾಂಡೆ ಅವರು `ನಿನ್ನ ಹೆರಿಗೆ ಬೇಕಾದರೆ ನಾನು ಮಾಡಿಸುತ್ತೇನೆ’ ಎಂದು ತಮಾಷೆಯಾಗಿ ಹೇಳಿದ್ದಾರೆ. ತಕ್ಷಣ `ನನ್ನ ಹೆರಿಗೆ ಆಗಿದೆ ಸರ್. ಕ್ಷೇತ್ರದ ಜನರ ಸಮಸ್ಯೆ ಆಲಿಸಿ’ ಎಂದು ರಾಧಾ ಹಿರೇಗೌಡರ್ ಅವರು ಪ್ರತಿಕ್ರಿಯಿಸಿದ್ದಾರೆ.
ಕೊನೆಗೆ ಆರ್ ವಿ ದೇಶಪಾಂಡೆ ಅವರು `ಆಯ್ತು ಬಿಡಮ್ಮ’ ಎಂದು ಆ ಮಾತನ್ನು ಅಲ್ಲಿಗೆ ಮುಗಿಸಿದ್ದಾರೆ. ಇದಾದ ನಂತರ ಇದೇ ವಿಷಯವಾಗಿ ರಾಧಾ ಹೀರೆಗೌಡರ್ ಅವರು ತಮ್ಮ ಗ್ಯಾರಂಟಿ ನ್ಯೂಸ್’ನಲ್ಲಿಯೂ ಮಾತನಾಡಿದ್ದಾರೆ. ಗಂಭೀರ ಸಮಸ್ಯೆಯ ಬಗ್ಗೆ ಕೇಳಿದಾಗ ಆರ್ ವಿ ದೇಶಪಾಂಡೆ ಅವರು ಉಡಾಫೆಯಾಗಿ ಮಾತನಾಡಿದ ನಿಲುವನ್ನು ಅವರು ಕಟುವಾಗಿ ಟೀಕಿಸಿದ್ದಾರೆ.
