ಶಿರಸಿಯಲ್ಲಿ ವನ್ಯಜೀವಿ ಹತ್ಯೆಗೆ ನಾಡಬಾಂಬ್ ಪ್ರಯೋಗ ನಡೆದಿದ್ದು, ನಾಡಬಾಂಬ್ ಸ್ಪೋಟಕ್ಕೆ ಹಸುವಿನ ಮುಖ ಛಿದ್ರವಾಗಿದೆ. ಹಂದಿ ಕಾಟಕ್ಕೆ ಇರಿಸಲಾಗಿದ್ದ ಬಾಂಬ್ ಹಸುವಿಗೆ ಆಹಾರವಾಗಿರಬಹುದಾದ ಬಗ್ಗೆ ಶಂಕಿಸಲಾಗಿದೆ.
ಮಳಲಿ ಗ್ರಾಮದ ಹೊಸಮನೆ ಬಳಿ ನಾಡಬಾಂಬ್ ಸ್ಪೋಟವಾಗಿದೆ. ಹಸುವಿನ ಬಾಯಿ ಒಳಗೆ ಬಾಂಬ್ ಸ್ಪೋಟ ನಡೆದಿದ್ದರಿಂದ ಹಸುವಿನ ಮುಖ ವಿಕಾರವಾಗಿದೆ. ಆ ಹಸು ನೀರು-ಆಹಾರ ಸೇವಿಸಲಾಗದೇ ಸಮಸ್ಯೆ ಅನುಭವಿಸುತ್ತಿದೆ.
ಹೊಸಮನೆಯ ಲಕ್ಷ್ಮಣ ಗೌಡ ಅವರು ಹೈನುಗಾರಿಕೆ ಮಾಡಿಕೊಂಡಿದ್ದು, ತಮ್ಮ ಹಸುವನ್ನು ಮೇವಿಗೆ ಬಿಟ್ಟಿದ್ದರು. ಅಕೇಶಿಯಾ ನಡುತೋಪಿನ ಬಳಿ ಬೆಳೆದ ಹುಲ್ಲು ಮೇಯುತ್ತಿರುವ ಹಸು ಬಾಂಬಿನ ಬಗ್ಗೆ ಅರಿವಿಲ್ಲದೇ ಅದನ್ನು ಕಬಳಿಸಿತು. ಕ್ಷಣಮಾತ್ರದಲ್ಲಿಯೇ ಬಾಂಬ್ ಸ್ಪೋಟವಾಯಿತು. ಪರಿಣಾಮ ಹಸುವಿನ ನಾಲಿಗೆ ಸುಟ್ಟಿದ್ದು, ಮುಖದ ಅರ್ಧಭಾಗ ತುಂಡಾಗಿದೆ.
ಮುಖ ಒಡೆದ ಪರಿಣಾಮ ಹಸು ಆಹಾರ ಸೇವಿಸುತ್ತಿಲ್ಲ. ನೀರು ಕುಡಿಯಲು ಸಹ ಸಾಧ್ಯವಾಗುತ್ತಿಲ್ಲ. ಸದ್ಯ ಆ ಹಸುವನ್ನು ಕೊಟ್ಟಿಯಲ್ಲಿ ಕಟ್ಟಿ ಆರೈಕೆ ಮಾಡಲಾಗುತ್ತಿದ್ದು, ಉಸಿರಾಟಕ್ಕೂ ಸಮಸ್ಯೆ ಅನುಭವಿಸುತ್ತಿರುವಂತೆ ಭಾಸವಾಗುತ್ತಿದೆ. ಬಾಂಬ್ ಸಿಡಿದ ಜಾಗದಲ್ಲಿ ಸ್ಪೋಟದ ಕುರುಹುಗಳು ಸಿಕ್ಕಿವೆ. ಎಲ್ಲೆಂದರಲ್ಲಿ ಸ್ಪೋಟವಾದ ಬಾಂಬಿನ ಚೂರುಗಳು ಬಿದ್ದಿವೆ.
