ದೇಶದಲ್ಲಿ ಆನ್ಲೈನ್ ಬೆಟ್ಟಿಂಗ್ ನಿಷೇಧ ಮಾಡಿರುವ ಮೊದಲನೆಯ ರಾಜ್ಯ ಎಂಬ ಕೀರ್ತಿ ಕರ್ನಾಟಕಕ್ಕೆ ಇದೆ. ಇದು ದಾಖಲೆಗಷ್ಟೇ. ಕಂಡಕoಡಲ್ಲಿ ಭಾರೀ ಗಾತ್ರದ ಜಾಹೀರಾತು ಬ್ಯಾನರ್ಗಳು ಕಾಣುತ್ತಿಲ್ಲ. ಆದರೆ. ಆಡುವವರು ಆಡುತ್ತಲೇ ಇದ್ದಾರೆ. ಹಣ ಕಳೆದುಕೊಳ್ಳುವವರು ಹಣ ಕಳೆದುಕೊಳ್ಳುತ್ತಲೇ ಇದ್ದಾರೆ. ಆನಲೈನ್ ಬೆಟ್ಟಿಂಗ್ ಸಂಪೂರ್ಣವಾಗಿ ನಿಂತಿಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ಅನೇಕ ಬೆಟ್ಟಿಂಗ್ ಅಪ್ಲೀಕೇಶನಗಳ ಪ್ರಮೋಷನ್ಗೆ ಯುವಕರು ಬಲಿಯಾಗುತ್ತಿದ್ದಾರೆ. ಈ ಬೆಟ್ಟಿಂಗ್ ಮೂಲಕ ದುಡಿಯಲು ಹೋಗಿ ಅನೇಕರು ದುಡ್ಡು ಕಳೆದುಕೊಳ್ಳುತ್ತಿದ್ದಾರೆ.
ಭಾರತ ಸರ್ಕಾರ ಆನ್ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ಗಳನ್ನು ಉತ್ತೇಜಿಸುವ ಹೊರಾಂಗಣ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಕಠಿಣ ಕಾನೂನು, ಆನ್ಲೈನ್ ಬೆಟ್ಟಿಂಗ್ ನಿಷೇಧವಿದ್ದರೂ ಸಹ ಮಾರುಕಟ್ಟೆಯಲ್ಲಿ ಅನೇಕ ಕಳ್ಳ ದಾರಿಯ ಬೆಟ್ಟಿಂಗ್ ವೆಬ್ಸೈಟ್ಗಳು ಹಾಗೂ ಮೊಬೈಲ್ ಅಪ್ಲೀಕೇಶನ್ಗಳು ಕೆಲಸ ಮಾಡುತ್ತಲೇ ಇವೆ. ಪರಿಣಾಮ, ಅನೇಕರ ಪ್ರಾಣಹಾನಿಗೂ ಕಾರಣವಾಗುತ್ತಿದೆ. ಗಮನಿಸಿ, ಭಾರತದಲ್ಲಿ ಆನ್ಲೈನ್ ಬೆಟ್ಟಿಂಗ್ ನಿಷೇಧವಿದ್ದರೂ ಸಹ ಜಗತ್ತಿನಲ್ಲಿಯೇ ಅತಿ ಹೆಚ್ಚು ಬೆಟ್ಟಿಂಗ್ ನಡೆಯುವ ಅಪಕೀರ್ತಿ ಭಾರತಕ್ಕಿದೆ. ವಿಶೇಷವಾಗಿ ಹದಿಹರೆಯದ ಅಲ್ಪಸಮಯದಲ್ಲಿ ದೊಡ್ಡ ಮೊತ್ತವನ್ನು ಗಳಿಸುವ ಆಸೆ ಯುವಕರಲ್ಲಿ ಕಡಿಮೆಯಾಗುತ್ತಿಲ್ಲ. ಕೇವಲ ಯುವಕರ ಹೆಸರನ್ನಷ್ಟೇ ಹೇಳುವಂತಿಲ್ಲ ಬಿಡಿ. ದೊಡ್ಡ ದೊಡ್ಡ ಉದ್ದಿಮೆದಾರರರು, ಕೋಟ್ಯಾಧಿಪತಿಗಳೂ ರಾತ್ರಿ ಬೆಳಗಾಗುವದರೊಳಗೆ ಉಟ್ಟ ಬಟ್ಟೆಯಲ್ಲಿ ಬೀದಿಗೆ ಬಿದ್ದವರಿದ್ದಾರೆ. ಎಲ್ಲಾ ಹಣ ಕಳೆದುಕೊಂಡು ನಂತರ ಸಾಲ ಮಾಡಿ ದಾರಿ ತೋಚದೆ ಮನೆಯಲ್ಲಿ ಹೇಳಿಕೊಳ್ಳಲಾಗದೆ ಆತ್ಮಹತ್ಯೆಗೆ ಮೋರೆ ಹೋದವರಿದ್ದಾರೆ.
ಕಳೆದ ವರ್ಷ ಕರ್ನಾಟಕದ ಓರ್ವ ವ್ಯಕ್ತಿ ಆನ್ಲೈನ್ ಬೆಟ್ಟಿಂಗ್ನಲ್ಲಿ 1.5 ಕೋಟಿ ರೂಪಾಯಿ ಸೋತು ಕುಟುಂಬ ಸಮೇತರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆoದರೆ, ಈ ದಂಧೆಯ ಕರಾಳತೆಯನ್ನೊಮ್ಮೆ ಊಹಿಸಿ. ಇವೆಲ್ಲವೂ ಕೂತ ಜಾಗದಲ್ಲಿಯೇ ಘಟಿಸಿಬಿಡುವ ಅಪರಾಧಗಳಾಗಿವೆ. ಮಟ್ಕಾ, ಓಸಿ, ಲಾಟರಿ ದಂಧೆಗಳೂ ಇಂದು ಇಂಟರ್ನೆಟ್, ಮೆಸೇಜಿಂಗ್ ಅಪ್ಲಿಕೇಶನ್ಗಳ ನೆರವಿನಿಂದಲೇ ನಡೆಯುತ್ತಿರುವುದು ಆಗಾಗ ಜಗಜ್ಜಾಹೀರಾಗುತ್ತಲೇ ಇದೆಯೆನ್ನಿ. ಇವುಗಳ ಸಾಲಿನಲ್ಲಿ ಬಂದು ನಿಂತಿರುವುದು ಆನ್ಲೈನ್ ಬೆಟ್ಟಿಂಗ್ ಮುಂಚೂಣಿಯಲ್ಲಿದೆ.
ತoತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿದೆ ಮತ್ತು ಜನರ ಅಗತ್ಯತೆಗಳೂ ಕೂಡ. ಕೆಲವು ದಶಕಗಳ ಹಿಂದೆ ಅನೈತಿಕವೆಂದು ಪರಿಗಣಿಸಲ್ಪಟ್ಟ ಹಲವು ಚಟುವಟಿಕೆಗಳು ಆನ್ಲೈನ್ ಬೆಟ್ಟಿಂಗ್ನಷ್ಟು ಅನೈತಿಕವೆನಿಸುತ್ತಲೇ ಇಲ್ಲ. ಯಾಕೆಂದರೆ, ಎಲ್ಲಾ ಕೆಲಸಗಳು ಕುಳಿತ ಜಾಗದಿಂದಲೇ ನಡೆಯುತ್ತವಲ್ಲ! ಇದೇ ಕಾರಣಕ್ಕೆ ಆನ್ಲೈನ್ ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿಬಿಟ್ಟಿದೆ. ಕ್ರಿಕೆಟ್, ಕಬಡ್ಡಿ, ಫುಟ್ಬಾಲ್ನಂತಹ ಪಂದ್ಯಗಳ ಸಂದರ್ಭದಲ್ಲoತೂ ಅದೆಷ್ಟು ಕೋಟಿ ಹಣ ಈ ಆನ್ಲೈನ್ ಬೆಟ್ಟಿಂಗ್ನಲ್ಲಿ ಯಾರ್ಯಾರ ಖಾತೆ ಸೇರುತ್ತವೋ, ಅದೆಷ್ಟು ಕುಟುಂಬಗಳು ಕಣ್ಣಿರಾಗುತ್ತವೋ ದೇವರೇ ಬಲ್ಲ.
ಇನ್ನೇನು, ಐಪಿಎಲ್ನಂತಹ ಸಾಲು ಸಾಲು ಪಂದ್ಯಾಟಗಳು ಬರುತ್ತಲೇ ಇರುತ್ತವೆ. ಅದೃಷ್ಟ ಪರೀಕ್ಷಿಸುವ ಹುಚ್ಚು ಬಿಟ್ಟುಬಿಡಿ. ಹಣ ಗಳಿಸುವುದೇ ಜೀವನದ ಗುರಿ ಎನ್ನುವುದಾದರೆ, ನಿಯತ್ತಾಗಿ ದುಡಿಯುವುದೊಂದೇ ದಾರಿ. ಹೊರತಾಗಿ, ಇಂತಹ ಅಡ್ಡದಾರಿಗಳಿಂದ ಹಣ ಹೆಚ್ಚಾಗುವುದಿರಲಿ, ಕುಟುಂಬವನ್ನು ಬೀದಿಗೆ ತರುವ ಪ್ರಕರಣಗಳೇ ಹೆಚ್ಚು. ಎಲ್ಲಾ ಕೆಲಸ, ಬದಲಾವಣೆಗಳನ್ನು ಸರ್ಕಾರ, ಕಾನೂನುಗಳ ಮೂಲಕವೇ ಮಾಡಬೇಕೆಂದಿಲ್ಲ. ಪ್ರಪಂಚದ ಆಗುಹೋಗುಗಳನ್ನು ಗಮನಿಸಿಯಾದರೂ ಬದಲಾಗಿ. ಬೆಟ್ಟಿಂಗ್ ಭೂತವನ್ನು ಮೇಲೇಳಲು ಬಿಡದಿರಿ.
