ರಾಧಾ ಹಿರೇಗೌಡರ್ ಅವರಿಗೆ ಹೆರಿಗೆ ಮಾಡಿಸುವುದಾಗಿ ಹೇಳಿದ ಹಳಿಯಾಳದ ಹಿರಿಯಶಾಸಕ ಆರ್ ವಿ ದೇಶಪಾಂಡೆ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಆರ್ ವಿ ದೇಶಪಾಂಡೆ ಅವರು ತಮಾಷೆಗೆ ಹೇಳಿದ ಮಾತನ್ನು ರಾಧಾ ಹಿರೇಗೌಡರ್ ಅವರು ಗಂಭೀರವಾಗಿ ಪರಿಗಣಿಸಿದ್ದು, ಪ್ರತಿಪಕ್ಷಗಳ ರಾಜಕೀಯಕ್ಕೂ ಅದೇ ಆಹಾರವಾಗಿದೆ!
ರಾಜ್ಯ ರಾಜಕಾರಣದಲ್ಲಿ ಆರ್ ವಿ ದೇಶಪಾಂಡೆ ಅವರು ಪ್ರಬುದ್ಧ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದಾರೆ. ಅದಾಗಿಯೂ ಅವರು ಆಗೊಮ್ಮೆ-ಈಗೊಮ್ಮೆ ತಮ್ಮ ಕೆಲ ನಿಲುವುಗಳಿಂದ ವಿವಾದಕ್ಕೆ ಈಡಾಗುತ್ತಿದ್ದಾರೆ. ಸಚಿವರಾಗಿ ಅಧಿಕಾರದಲ್ಲಿದ್ದಾಗ ಸಹ ಆರ್ ವಿ ದೇಶಪಾಂಡೆ ಅವರು ಆಗಾಗ ಹಾಸ್ಯ ಚಟಾಕಿ ಹಾರಿಸುತ್ತಿದ್ದು, ಅನೇಕ ಬಾರಿ ಅದೇ ಅವರ ಪಾಲಿಗೆ ಮುಳುವಾಗಿತ್ತು. ಸ್ವಪಕ್ಷದವರನ್ನು ಸಹ ಆರ್ ವಿ ದೇಶಪಾಂಡೆ ಅವರು ಹಲವು ಬಾರಿ ಟೀಕಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿತ್ತು. ಈಚೆಗೆ ಸಹ ಆರ್ ವಿ ದೇಶಪಾಂಡೆ ಅವರು ಹಲವು ವಿಷಯವಾಗಿ ಜನರ ಪರ ಮಾತನಾಡಿದ್ದು, ಆಡಳಿತಾರೂಡ ಸರ್ಕಾರದ ಇರುಸು-ಮುರುಸಿಗೆ ಕಾರಣವಾಗಿತ್ತು.
ಆದರೆ, ಮೊನ್ನೆ ಆರ್ ವಿ ದೇಶಪಾಂಡೆ ಅವರು ಮಾತನಾಡಿದ್ದು ಜನಪರ ನಿಲುವು ಆಗಿರಲಲ್ಲ. ಯಾರನ್ನು ಟೀಕಿಸಬೇಕು ಎಂಬ ಉದ್ದೇಶದಿಂದಲೂ ಅವರು ವರ್ತಿಸಿರಲಿಲ್ಲ. ಅದಾಗಿಯೂ, ಅವರು ಆಡಿದ ಮಾತಿನಿಂದ ಮಹಿಳಾ ಪತ್ರಕರ್ತೆಯೊಬ್ಬರು ಅವಮಾನ ಅನುಭವಿಸಿದ್ದು ಇದೀಗ ಸುದ್ದಿಯಾಗುತ್ತಿದೆ. ಅಭಿವೃದ್ಧಿ ವಿಷಯವಾಗಿ ಕೇಳಿದ ಪ್ರಶ್ನೆಗೂ ಆರ್ ವಿ ದೇಶಪಾಂಡೆ ಅವರು ಹಾಸ್ಯದ ದಾಟಿಯಲ್ಲಿ ಉತ್ತರ ನೀಡಿದ್ದು ಪ್ರತಿಪಕ್ಷಗಳ ಟೀಕೆಗೆ ಕಾರಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ ಎಂಬ ವಿಷಯವಾಗಿ ಗ್ಯಾರಂಟಿ ನ್ಯೂಸ್’ನ ಪತ್ರಕರ್ತೆ ರಾಧಾ ಹಿರೇಗೌಡರ್ ಅವರು ಆರ್ ವಿ ದೇಶಪಾಂಡೆ ಅವರನ್ನು ಪ್ರಶ್ನಿಸಿದ್ದರು. ಆಗ, ಆರ್ ವಿ ದೇಶಪಾಂಡೆ ಅವರು ರಾಧಾ ಹಿರೇಗೌಡರ್ ಅವರ ಬಳಿ ತಮಾಷೆ ಮಾಡಿದ್ದರು. ಆರ್ ವಿ ದೇಶಪಾಂಡೆ ಅವರ ಜೊತೆಗಿದ್ದವರು ಸಹ ಶಾಸಕರ ಮಾತು ಕೇಳಿ ನಕ್ಕರು. ಸಾರ್ವಜನಿಕರ ಮುಂದೆ ತಮ್ಮನ್ನು ತಮಾಷೆ ಮಾಡಿದ ಕಾರಣ ರಾಧಾ ಹೀರೆಗೌಡರ್ ಅವರು ಆ ಕ್ಷಣಕ್ಕೆ ಅವಮಾನಕ್ಕೆ ಒಳಗಾದರು. ಜೊತೆಗೆ ರಾಧಾ ಹೀರೆಗೌಡರ್ ಅವರು ಆರ್ ವಿ ದೇಶಪಾಂಡೆ ಅವರಿಗೆ ಸ್ಥಳದಲ್ಲಿ ಕೌಂಟರ್ ಸಹ ನೀಡಿದರು. ಅದಾದ ನಂತರ ಎಲ್ಲರೂ ಆ ವಿಷಯ ಮರೆತರೂ ರಾಧಾ ಹಿರೇಗೌಡರ್ ಅವರು ದೇಶಪಾಂಡೆ ಅವರ ಮಾತು ಮರೆಯಲಿಲ್ಲ. ಆರ್ ವಿ ದೇಶಪಾಂಡೆ ಅವರು ಆಡಿದ ಮಾತುಗಳ ಬಗ್ಗೆ ಅವರು ಮಾಧ್ಯಮದಲ್ಲಿ ಪ್ರಸಾರ ಮಾಡಿ, ತಮ್ಮ ನಿಲುವನ್ನು ಪ್ರಕಟಿಸಿದರು. ಆರ್ ವಿ ದೇಶಪಾಂಡೆ ಅವರ ವಿರುದ್ಧ ತಮ್ಮ ವಾಹಿನಿಯಲ್ಲಿ ಕಿಡಿಕಾರಿದ್ದರು.
ಸದ್ಯ ಇದೇ ವಿಷಯವನ್ನು ಬಿಜೆಪಿ ತಮ್ಮ ರಾಜಕೀಯ ಅಸ್ತçವಾಗಿ ಬಳಸಿಕೊಂಡಿದೆ. ಆರ್ ವಿ ದೇಶಪಾಂಡೆ ಅವರ ಸಾಂಪ್ರದಾಯಿಕ ವಿರೋಧಿಯೂ ಆಗಿರುವ ಹಳಿಯಾಳದ ಮಾಜಿ ಶಾಸಕ ಸುನೀಲ ಹೆಗಡೆ ಅವರು ಮೊದಲು ಈ ವಿಷಯವನ್ನು ಖಂಡಿಸಿದ್ದಾರೆ. `ಶಾಸಕರು ಮಹಿಳೆ ಜೊತೆ ಅಸಂಬದ್ಧವಾಗಿ ಮಾತನಾಡಿರುವುದು ಖಂಡನೀಯ’ ಎಂದು ಸುನೀಲ ಹೆಗಡೆ ಹೇಳಿದ್ದಾರೆ. `ಕಾಂಗ್ರೆಸ್ ಸಕಾರ ಶಕ್ತಿ, ಗೃಹಲಕ್ಷಿö್ಮÃ ಯೋಜನೆ ಮೂಲಕ ಮಹಿಳೆಯರ ಉನ್ನತಿಗೆ ಶ್ರಮಿಸುತ್ತಿದೆ. ಹೀಗಿರುವಾಗ ಆರ್ ವಿ ದೇಶಪಾಂಡೆ ಅವರು ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿ ಅವರ ಗೌರವ ಕಳೆದಿದ್ದಾರೆ’ ಎಂದು ಸುನೀಲ ಹೆಗಡೆ ಅವರು ಆಕ್ಷೇಪಿಸಿದ್ದಾರೆ.
ಸುನೀಲ ಹೆಗಡೆ ಅವರ ಈ ಹೇಳಿಕೆಯಿಂದ ಶಕ್ತಿಪಡೆದ ಬಿಜೆಪಿಯ ಮಹಿಳಾ ಮೋರ್ಚಾದವರು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ ಮಂಜುಳಾ ಅವರು ಸೆ 4ರಂದು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿ ಆರ್ ವಿ ದೇಶಪಾಂಡೆ ಅವರ ವಿರುದ್ಧ ಪ್ರತಿಭಟಿಸುವುದಾಗಿ ಘೋಷಿಸಿದ್ದಾರೆ. `ಆರ್ ವಿ ದೇಶಪಾಂಡೆ ಅವರು ಕೂಡಲೇ ಕ್ಷಮೆ ಕೋರಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಇದರೊಂದಿಗೆ ಬಿಜೆಪಿ ವಕ್ತಾರ ವಿಜಯಪ್ರಸಾದ ಸಹ ಆರ್ ವಿ ದೇಶಪಾಂಡೆ ಅವರ ಮಾತಿನ ಬಗ್ಗೆ ಬೇಸರವ್ಯಕ್ತಪಡಿಸಿದ್ದಾರೆ.
