ಸೊಳ್ಳೆಗಳ ವಿರುದ್ಧ ಸಮರ ಸಾರಲು ಉದ್ದೇಶಿಸಿರುವ ಸರ್ಕಾರ ಸೊಳ್ಳೆ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಿದವರಿಗೆ ನೋಟಿಸ್ ನೀಡಿ ದಂಡ ವಿಧಿಸಲು ಸಜ್ಜಾಗಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರಿಗೂ ಸರ್ಕಾರದಿಂದ ನಿರ್ದೇಶನ ಬಂದಿದ್ದು, ಸೊಳ್ಳೆ ಸಂತತಿ ಜಾಸ್ತಿ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ.
ಅನೇಕ ಮನೆ, ಬಡಾವಣೆ, ಹೊಟೇಲ್, ಶಿಕ್ಷಣ ಸಂಸ್ಥೆ, ಉದ್ಯಾನವನ, ರೆಸಾರ್ಟ ಜೊತೆ ಸರ್ಕಾರಿ ಕಚೇರಿಗಳು ಸಹ ಸೊಳ್ಳೆ ಉತ್ಪಾದನಾ ಕೇಂದ್ರಗಳಾಗಿವೆ. ಇದರಿಂದ ಜನರ ಆರೋಗ್ಯದ ಮೇಲೆ ವ್ಯಾಪಕ ಪ್ರಮಾಣದಲ್ಲಿ ದುಷ್ಪರಿಣಾಮ ಉಂಟಾಗುತ್ತಿದ್ದು, ಸೊಳ್ಳೆ ಉತ್ಪಾದನೆಗೆ ಕಾರಣವಾಗುತ್ತಿರುವವರನ್ನು ಗುರುತಿಸಲು ಸರ್ಕಾರ ಸೂಚಿಸಿದೆ. ಸಣ್ಣ ಸಣ್ಣ ಅಂಗಡಿಗಳಿAದ ಹಿಡಿದು ಸೂಪರ್ಮಾರ್ಟಿನವರೆಗೆ ಹಾಗೂ ಎಳನೀರು ವ್ಯಾಪಾರಿಗಳಿಂದಹಿಡಿದು ಕಾರ್ಖಾನೆ-ಕೈಗಾರಿಕೆಗಳವರೆಗೆ ಪಂಚರ್ ಹಾಕುವ ಮಳಿಗೆ, ನರ್ಸರಿ, ತ್ಯಾಜ್ಯ ಸಂಗ್ರಹಣ ಘಟಕಗಳ ಮೇಲೆ ನಿಗಾವಹಿಸುವಂತೆ ಸೂಚಿಸಲಾಗಿದೆ. ಇಲ್ಲಿ ಸೊಳ್ಳೆ ಸಂತಾನೋತ್ಪತ್ತಿ ನಡೆಯುತ್ತಿದ್ದರೆ ಸಂಬoಧಿಸಿದವರಿಗೆ 400ರೂಪಾಯಿಗಳಿಂದ 4 ಸಾವಿರ ರೂಪಾಯಿವರೆಗೆ ದಂಡ ವಿಧಿಸಲು ಸರ್ಕಾರ ಆದೇಶಿಸಿದೆ.
ನಗರದ ಜೊತೆ ಗ್ರಾಮಾಂತರ ಪ್ರದೇಶದಲ್ಲಿಯೂ ಸೊಳ್ಳೆಗಳ ನಿಯಂತ್ರಣಕ್ಕೆ ಸರ್ಕಾರ ಮನಸ್ಸು ಮಾಡಿದೆ. ಡೆಂಗ್ಯೂ ರೋಗ ನಿಯಂತ್ರಣಕ್ಕಾಗಿ ಈ ನಿಯಮ ಅನುಸರಿಸುತ್ತಿದ್ದು, ಆ ಮೂಲಕ ಈಡೀಸ್ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವ ಗುರಿ ಸಕಾರದ ಮುಂದಿದೆ. ಈ ಹಿನ್ನಲೆ ಜಿಲ್ಲಾಧಿಕಾರಿಗಳು ಸಹ ತಮ್ಮ ಅಧಿಕಾರವನ್ನು ಪ್ರತ್ಯೇಕಿಸಿ ವಿವಿಧ ಅಧಿಕಾರಿಗಳಿಗೆ ಹಂಚಿಕೆ ಮಾಡಿದ್ದಾರೆ. ಗ್ರಾಮೀಣ ಭಾಗಗಳಿಗೆ ಗ್ರಾಮ ಪಂಚಾಯತ ಅಧಿಕಾರಿ ಹಾಗೂ ನಗರ ಪ್ರದೇಶಗಳಿಗೆ ನಗರಸಭೆ ನಿರ್ದೇಶಿಸಿದ ಅಧಿಕಾರಿಗಳಿಗೆ ಈ ಜವಾಬ್ದಾರಿ ನೀಡಲಾಗಿದೆ.
`ಈ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸೊಳ್ಳೆ ಉತ್ಪಾದನೆ ಆಗುತ್ತಿದ್ದರೆ ಅದನ್ನು ತಡೆಯಬೇಕು. ಈ ಬಗ್ಗೆ ಜನ ಜಾಗೃತಿ ನಡೆಸಬೇಕು. ನಿಯಮ ಉಲ್ಲಂಘಿಸುವುವರಿಗೆ ನೋಟಿಸ್ ನೀಡಿ, ದಂಡ ವಸೂಲಿ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸೂಚನೆ ನೀಡಿದ್ದಾರೆ. ದಂಡ ವಸೂಲಿ ಮೊತ್ತವನ್ನು ಮತ್ತೆ ಜನ ಜಾಗೃತಿ ಹಾಗೂ ಡೆಂಗ್ಯು ನಿಯಂತ್ರಣ ಚಟುವಟಿಕೆಗೆ ಬಳಸುವಂತೆ ಅವರು ಸೂಚಿಸಿದ್ದಾರೆ.
