ಮುಂಡಗೋಡಿನ ಕಾಂಗ್ರೆಸ್ ನಾಯಕ ಅರುಣಕುಮಾರ್ ಗೊಂದಳೆ ಅವರ ವಿರುದ್ಧ ಅವರ ಪತ್ನಿ ಶಿಲ್ಪಾ ಟಿ ಅವರು ತಿರುಗಿ ಬಿದ್ದಿದ್ದಾರೆ. ಮೂರು ವರ್ಷದಿಂದ ನಿರಂತರ ಹಿಂಸೆ ಅನುಭವಿಸಿದ ಅವರು ಪತಿಯ ಕಾಟ ತಾಳಲಾರದೇ ಪೊಲೀಸರ ಮೊರೆ ಹೋಗಿದ್ದಾರೆ.
ಶಿಲ್ಪಾ ಟಿ ಅವರು ಹಾನಗಲ್’ನ ಕುಮಾರೇಶ್ವರ ಮಹಾ ವಿದ್ಯಾಲಯದಲ್ಲಿ ಸಹಾಯಕ ಪ್ರಾದ್ಯಾಪಕಿಯಾಗಿದ್ದಾರೆ. ಮುಂಡಗೋಡಿನ ನ್ಯಾಸರ್ಗಿ ಪ್ಲಾಟಿನಲ್ಲಿ ವ್ಯವಹಾರ ಮಾಡಿಕೊಂಡಿದ್ದ ಅರುಣಕುಮಾರ್ ಗೊಂದಳೆ ಅವರು ಶಿಲ್ಪಾ ಟಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. 18 ವರ್ಷಗಳ ಹಿಂದೆ ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ಅವರ ಮದುವೆ ಆಗಿದ್ದು, 15 ವರ್ಷಗಳ ಕಾಲ ಸುಖ ಸಂಸಾರದಲ್ಲಿ ಸಮಸ್ಯೆ ಇರಲಿಲ್ಲ. ಈ ನಡುವೆ ಅರುಣಕುಮಾರ್ ಗೊಂದಳೆ ರಾಜಕೀಯ ಪ್ರವೇಶಿಸಿ, ಸದ್ಯ ಕಾಂಗ್ರೆಸ್ಸಿನಲ್ಲಿ ಗುರುತಿಸಿಕೊಂಡಿದ್ದಾರೆ.
ಅರುಣಕುಮಾರ್ ಗೊಂದಳೆ ಹಾಗೂ ಶಿಲ್ಪಾ ಟಿ ಅವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಮಕ್ಕಳಾಗಿದ್ದು, ಕಿರಿಯ ಮಗ ಅಥರ್ವರನ್ನು ನೋಡಿಕೊಳ್ಳಲು ಸವಿತಾ ಲಚ್ಚಿ ಎಂಬಾತರು ಬರುತ್ತಿದ್ದರು. ಕ್ರಮೇಣ ಅವರೇ ಮನೆ ಕೆಲಸಕ್ಕೂ ನೇಮಕವಾದರು. ಅರುಣಕುಮಾರ ಹಾಗೂ ಸವಿತಾ ಲಚ್ಚಿ ಅತ್ಯಂತ ಸಲುಗೆಯಿಂದ ಇರುವುದನ್ನು ಶಿಲ್ಪಾ ಅವರು ಸಹಿಸಲಿಲ್ಲ. ಇದನ್ನು ಪ್ರಶ್ನಿಸಿದ ಕಾರಣ ಅರುಣಕುಮಾರ್ ಅವರು ಪತ್ನಿಗೆ ಕಾಟ ಕೊಡಲು ಶುರು ಮಾಡಿದರು. `ಮನೆ ಕೆಲಸದವಳ ಜೊತೆ ಸಲುಗೆ ಬೇಡ’ ಎಂದಿದಕ್ಕೆ ಪತ್ನಿಯನ್ನು ಕೆಟ್ಟ ಶಬ್ದಗಳಿಂದ ನಿಂದಿಸಿದರು. ಜೊತೆಗೆ ದೈಹಿಕ ಹಿಂಸೆ ಕೊಡಲು ಶುರು ಮಾಡಿದರು.
ಕಳೆದ ಮೂರು ವರ್ಷದ ಅವಧಿಯಲ್ಲಿ ಅರುಣಕುಮಾರ್ ಹಾಗೂ ಶಿಲ್ಪಾ ಅವರ ನಡುವೆ ವೈಮನಸ್ಸು ಮೂಡಿತು. ಅನಗತ್ಯವಾಗಿ ಬೈಯ್ಯುವುದು, ಎದುರಿಗೆ ಸಿಕ್ಕಾಗಲೆಲ್ಲ ಶಿಲ್ಪಾ ಅವರಿಗೆ ಹೊಡೆಯುವುದು ಅರುಣಕುಮಾರ್ ಅವರ ಹವ್ಯಾಸವಾಯಿತು. ಅದಾಗಿಯೂ ಮೂರು ವರ್ಷ ಈ ನೋವು ಸಹಿಸಿಕೊಂಡ ಶಿಲ್ಪಾ ಅವರು ಅಗಸ್ಟ 29ರಂದು ಮನೆ ಕೆಲಸದವಳ ವಿಷಯವಾಗಿ ದೊಡ್ಡದಾಗಿ ಮಾತನಾಡಿದರು. ಇದರಿಂದ ಸಿಟ್ಟಾದ ಅರುಣಕುಮಾರ್ ಆ ದಿನ ರಾತ್ರಿ `ಅದನ್ನು ಕೇಳಲು ನೀನು ಯಾರು?’ ಎಂದು ಪ್ರಶ್ನಿಸಿದರು. `ಈ ವಿಷಯ ಎಲ್ಲಾದರೂ ಹೇಳಿದರೆ ಕೊಲೆ ಮಾಡುವೆ’ ಎಂದು ಬೆದರಿಸಿ ಇನ್ನಷ್ಟು ಹೊಡೆದರು.
ಈ ಎಲ್ಲಾ ವಿಷಯಗಳ ಬಗ್ಗೆ ಶಿಲ್ಪಾ ಅವರು ಮುಂಡಗೋಡು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪಿಎಸ್ಐ ಪರಶುರಾಮ ಮಿರ್ಜಗಿ ಅವರು ತನಿಖೆ ಶುರು ಮಾಡಿದ್ದಾರೆ.
