ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ 33 ವರ್ಷಗಳಿಂದ ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಡುತ್ತಿದ್ದು, 34ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಹೊತ್ತಿನಲ್ಲಿ ಸುಪ್ರೀಂ ಕೋರ್ಟಿನಿಂದ ಮಹತ್ವದ ತೀರ್ಪು ಹೊರಬರುವ ಸಾಧ್ಯತೆಯಿದೆ.
2008ರಲ್ಲಿ ಪರಿಸರ ಸಂಘಟನೆಗಳು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಸಕ್ತಿಯ ಅರ್ಜಿ ದಾಖಲಿಸಿದ್ದರು. ಅರಣ್ಯವಾಸಿಗಳನ್ನು ಸಾಗುವಳಿ ಕ್ಷೇತ್ರದಿಂದ ಒಕ್ಕಲೆಬ್ಬಿಸಿ ಅತಿಕ್ರಮಿಸಿರುವ ಅರಣ್ಯ ಕೇತ್ರವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು 8 ಸಂಘಟನೆಯವರು ಅರ್ಜಿ ಸಲ್ಲಿಸಿದ್ದರು. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಸುಪ್ರೀಂ ಕೊರ್ಟನಲ್ಲಿ ಪರಿಸರವಾದಿಗಳು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗೆ ಆಕ್ಷೇಪಿಸಿದ್ದರು.
ಈ ಪ್ರಕರಣದ ಕುರಿತು ಅಧ್ಯಯನ ನಡೆಸಿದ ಸುಪ್ರೀಂ ಕೋರ್ಟ ಅಕ್ಟೊಬರ್ 10ರಂದು ಅಂತಿಮ ಆದೇಶ ನೀಡಲಿದೆ. ಸುಪ್ರೀಂ ಕೋರ್ಟು ನೀಡುವ ಆದೇಶವು ದೇಶಾದ್ಯಂತ ತಿರಸ್ಕಾರಕ್ಕೆ ಒಳಗಾಗಿರುವ 18 ಲಕ್ಷಕ್ಕೂ ಅಧಿಕ ಅರಣ್ಯವಾಸಿಗಳ ಭವಿಷ್ಯ ನಿರ್ಧರಿಸಲಿದೆ. ಜೊತೆಗೆ ಹೋರಾಟಗಾರರ ಮುಂದಿನ ಹೋರಾಟದ ದೃಷ್ಠಿಯಿಂದಲೂ ಈ ಆದೇಶ ಮಹತ್ವದ್ದಾಗಿದೆ. ಸುಪ್ರಿಂ ಕೊರ್ಟನಲ್ಲಿ ವಿಶ್ರಾಂತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ದಾಸ್ ಅವರ ನೇತೃತ್ವದಲ್ಲಿ ಹಿರಿಯ ವಕೀಲ ತಂಡವು ಹೋರಾಟಗಾರರ ವೇದಿಕೆಯ ಪರವಾಗಿ ವಾದ ಮಂಡಿಸಲು ಸಜ್ಜಾಗಿದೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸೆ 13ರಂದು 34ನೇ ವರ್ಷಕ್ಕೆ ಕಾಲಿಡಲಿದೆ. ಅಂದು ಮುಂದಿನ ಹೋರಾಟದ ಕುರಿತು ಚಿಂತನ ಕೂಟ ಸಂಘಟಿಸಲು ನಿರ್ಧರಿಸಲಾಗಿದೆ. `ಕಳೆದ 33 ವರ್ಷದಿಂದ ಸಾಂಘಿಕ ಮತ್ತು ಕಾನೂನಾತ್ಮಕ ಹೋರಾಟವನ್ನು ಸಂಘಟನಾತ್ಮಕವಾಗಿ ಸಂಘಟಿಸಿದ್ದಾಗಲೂ, ಅರಣ್ಯ ಭೂಮಿ ಹಕ್ಕು ಮರಿಚಿಕೆಯಾಗಿದೆ. ಸೆಪ್ಟೆಂಬರ್ 13ರ ಶನಿವಾರ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಚಿಂತನ ಕೂಟ ಏರ್ಪಡಿಸಲಾಗಿದೆ’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾಹಿತಿ ನೀಡಿದ್ದಾರೆ.
