ಆದಾಯ ತೆರಿಗೆ ವಂಚಿಸುವವರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಯಲ್ಲಾಪುರ ಮೂಲದ ನಿವೃತ್ತ ಐಆರ್ಎಸ್ ಅಧಿಕಾರಿ ಗಣಪತಿ ಭಟ್ಟ ಅವರು ಇದೀಗ ಹೈಕೋರ್ಟ ನ್ಯಾಯಾಧೀಶ ಯಶವಂತ ವರ್ಮಾ ಅವರ ಜಾತಕ ಜಾಲಾಡಲು ಸಿದ್ಧರಾಗಿದ್ದಾರೆ. ಅಕ್ರಮ ಹಣಕಾಸು ವಹಿವಾಟು ನಡೆಸಿದ ಆರೋಪ ಎದುರಿಸುತ್ತಿರುವ ಹೈಕೋರ್ಟ ನ್ಯಾಯಮೂರ್ತಿ ಅವರ ವಿಚಾರಣೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತನಿಖಾ ಸಮಿತಿ ನೇಮಕ ಮಾಡಿದ್ದು, ಯಲ್ಲಾಪುರದ ಮಾಗೋಡು ಬಳಿಯ ಬಿದ್ರೆಪಾಲಿನ ಗಣಪತಿ ಭಟ್ಟ ಅವರು ಈ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಗಣಪತಿ ಭಟ್ ಅವರು ಆದಾಯ ತೆರಿಗೆ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. 1989ನೇ ಬ್ಯಾಚ್ನ (ಆದಾಯ ತೆರಿಗೆ) ಐಆರ್ಎಸ್ ಅಧಿಕಾರಿಯಾಗಿರುವ ಗಣಪತಿ ಭಟ್ ಬೆಂಗಳೂರು ಕಚೇರಿ ಹೊಂದಿದ್ದ ಕರ್ನಾಟಕ ಮತ್ತು ಗೋವಾ ಪ್ರಾದೇಶಿಕ ಆದಾಯ ತೆರಿಗೆ ಇಲಾಖೆಯ ಪ್ರಧಾನ ಮುಖ್ಯ ಆಯುಕ್ತರಾಗಿದ್ದರು. ಇದಕ್ಕೂ ಮುನ್ನ ಅವರು ದೆಹಲಿಯಲ್ಲಿ ಅಂತಾರಾಷ್ಟ್ರೀಯ ತೆರಿಗೆ ವಿಭಾಗದ ಪ್ರಧಾನ ಮುಖ್ಯ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದರು.
ಆದಾಯ ತೆರಿಗೆ ಇಲಾಖೆಯ ಮೂರು ದಶಕಗಳಿಗಿಂತ ಹೆಚ್ಚಿನ ವೃತ್ತಿಜೀವನದಲ್ಲಿ ಅವರು ಹಲವಾರು ಪ್ರಮುಖ ಮತ್ತು ಸೂಕ್ಷ್ಮ ಹುದ್ದೆಗಳನ್ನು ಅವರು ನಿರ್ವಹಿಸಿದ್ದಾರೆ. ಸಂಕೀರ್ಣ ತನಿಖೆಗಳು ಹಾಗೂ ನೀತಿ ವಿಷಯಗಳಲ್ಲಿ ಗಣಪತಿ ಭಟ್ಟ ಅವರು ಸಾಕಷ್ಟು ಪರಿಣಿತಿಪಡೆದಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ಸಾಕಷ್ಟು ಕಾರ್ಯಾಚರಣೆಗಳನ್ನು ನಡೆಸಿದ್ದ ಗಣಪತಿ ಭಟ್ಟ ಅವರು ಭಾರತೀಯ ಪ್ರಜೆಗಳು ಗಡಿ ಆಚೆಹೊಂದಿದ ಹಣಕಾಸು ವ್ಯವಹಾರಗಳನ್ನು ಸಹ ಪತ್ತೆ ಮಾಡಿದ್ದರು. ಜೊತೆಗೆ ವಿದೇಶಿ ಬ್ಯಾಂಕ್ ಖಾತೆಗಳ ಮಾಹಿತಿ ಸಂಗ್ರಹಿಸಿದ್ದರು.
ಗಣಪತಿ ಭಟ್ ಅವರು ಭಾರತ ಸರ್ಕಾರದ ಅನೇಕ ಇಲಾಖೆಗಳಲ್ಲೂ ನಿಯೋಜನೆಯ ಮೇಲೆ ಕಾರ್ಯ ನಿರ್ವಹಿಸಿದ್ದಾರೆ. ವಿಶೇಷವಾಗಿ ಲೋಕಸಭೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಹಲವಾರು ಸಂಸದೀಯ ಸಮಿತಿಗಳ ಜವಾಬ್ದಾರಿ ನಿಭಾಯಿಸಿದ್ದಾರೆ. ಪ್ರಸ್ತುತ ಗಣಪತಿ ಭಟ್ಟ ಅವರು ಭಾರತೀಯ ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಅಧಿಕಾರಗಳ ವಿಂಗಡಣೆ ಕುರಿತಂತೆ ಸಂಶೋಧನೆ ನಡೆಸುತ್ತಿದ್ದಾರೆ. ಸಂಸ್ಕೃತ ಸಾಹಿತ್ಯದಲ್ಲಿ ಸಹ ಗಣಪತಿ ಭಟ್ಟ ಅವರು ವಿಶೇಷ ಆಸಕ್ತಿಹೊಂದಿದ್ದು, ಸಮಕಾಲೀನ ಸಾಮಾಜಿಕ-ರಾಜಕೀಯ ವಿಷಯಗಳ ಬಗ್ಗೆ ಸಾಕಷ್ಟು ಅರಿತಿದ್ದಾರೆ.
ಸದ್ಯ ಗಣಪತಿ ಭಟ್ಟ ಅವರ ಸೇವೆ ಗಮನಿಸಿದ ಲೋಕಸಭೆ ಅವರನ್ನು ತನಿಖಾ ಸಮಿತಿಗೆ ನೇಮಿಸಿದೆ. ಈ ಸಮಿತಿಯ ಸದಸ್ಯರಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ ಹಾಗೂ ಹಿರಿಯ ವಕೀಲ ಬಿ ವಿ ಆಚಾರ್ಯ ಅವರು ನಿಯುಕ್ತರಾಗಿದ್ದಾರೆ.
