ತಾಯಿ ಆರೈಕೆಗೆ ಬಂದವಳ ಮೇಲೆ ಅತ್ಯಾಚಾರ ಮಾಡಿದ್ದ ಯಲ್ಲಾಪುರದ ಉಮ್ಮಚ್ಗಿಯ ನಾಗೇಶ ಸಿದ್ದಿಗೆ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಉಮ್ಮಚ್ಗಿಯ ಹುಳಸೆಮನೆ ಬಳಿಯ ನಾಗೇಶ @ ನಾರಾಯಣ ಸಿದ್ದಿ ಅವರ ತಾಯಿ ಕಾನ್ಸರ್ ರೋಗದಿಂದ ಬಳಲುತ್ತಿದ್ದರು. ಸ್ಥಳೀಯ ಮಹಿಳೆಯೊಬ್ಬರು ಅವರ ಆರೈಕೆ ಮಾಡುತ್ತಿದ್ದರು. ಆರೈಕೆಗೆ ಬರುವ ಮಹಿಳೆ ನಾಗೇಶ ಸಿದ್ದಿ ಅವರ ದೂರದ ಸಂಬAಧಿಯೂ ಆಗಿದ್ದರು. ನಿತ್ಯವೂ ತಾಯಿ ಆರೈಕೆಗೆ ಬರುತ್ತಿದ್ದ ಮಹಿಳೆ ಮೇಲೆ ನಾಗೇಶ ಸಿದ್ದಿ ಅವರ ಕೆಟ್ಟ ದೃಷ್ಠಿ ಬಿದ್ದಿತು. 2022ರ ಡಿಸೆಂಬರ್ 18ರಂದು ಸಂಜೆ ಆ ಮಹಿಳೆ ಮನೆಗೆ ಹೋದ ನಾಗೇಶ ಸಿದ್ದಿ `ತಾಯಿಗೆ ಹುಷಾರಿಲ್ಲ’ ಎಂದು ಸುಳ್ಳು ಹೇಳಿದ್ದರು. `ನಿಮ್ಮನ್ನು ಈಗಲೇ ನೋಡಬೇಕು ಎಂದಿದ್ದಾರೆ’ ಎಂದು ಆರೈಕೆಗೆ ಬರುವ ಮಹಿಳೆಯ ಬಳಿ ಹೇಳಿದ್ದರು. `ನಿಮ್ಮನ್ನು ಕರೆದುಕೊಂಡು ಬರಲು ನನಗೆ ಹೇಳಿದ್ದಾರೆ’ ಎಂದು ನಂಬಿಸಿದ್ದರು.
ತುರ್ತು ಕರೆ ಬಂದ ಕಾರಣ ಆ ಮಹಿಳೆ ಉಟ್ಟಬಟ್ಟೆಯಲ್ಲಿಯೇ ನಾಗೇಶ ಸಿದ್ದಿ ಜೊತೆ ಹೆಜ್ಜೆ ಹಾಕಿದ್ದರು. ಮುಖ್ಯ ರಸ್ತೆಯಲ್ಲಿ ನಡೆದು ಹೋಗುವಾಗ `ಈ ರಸ್ತೆ ದೂರ. ಹೀಗಾಗಿ ಒಳ ರಸ್ತೆಯಲ್ಲಿ ಹೋಗೋಣ’ ಎಂದು ನಾಗೇಶ ಸಿದ್ದಿ ಆ ಮಹಿಳೆ ಬಳಿ ಹೇಳಿದ್ದರು. ಹೀಗಾಗಿ ಆ ಮಹಿಳೆಯೂ ಒಳ ರಸ್ತೆಯಲ್ಲಿ ಹೊರಟಿದ್ದು, ಬಾಳೆಗದ್ದೆ ನರಿಸರ ಮೂಲಕ ಅವರಿಬ್ಬರು ಸಾಗುತ್ತಿದ್ದರು. ನರಿಸರ ಸೇತುವೆ ಬಳಿಯ ಹುಲಿಯಪ್ಪನ ಕಟ್ಟೆಯ ಬಳಿ ಅವರಿಬ್ಬರು ಆ ದಿನ ರಾತ್ರಿ 8ಗಂಟೆಗೆ ತಲುಪಿದರು. ಆಗ ನಾಗೇಶ ಸಿದ್ದಿ ತಮ್ಮ ಮಾತಿನ ವರಸೆ ಬದಲಿಸಿದರು.`ನನ್ನ ಮಾತು ಕೇಳಿದರೆ ಮಾತ್ರ ಮನೆಗೆ ಕರೆದೊಯ್ಯುವೆ. ಇಲ್ಲವಾದರೆ ಇಲ್ಲಿಯೇ ಕೊಲೆ ಮಾಡುವೆ’ ಎಂದು ಮಹಿಳೆಯನ್ನು ಬೆದರಿಸಿದರು. ಆ ಮಹಿಳೆ ಕೈ ಮುಗಿದು ಕೇಳಿಕೊಂಡರು ಬಿಡದೇ ಅವರ ಬಟ್ಟೆ ಹರಿದರು.
ಆ ಮಹಿಳೆ ಮೇಲೆ ಅತ್ಯಾಚಾರವೆಸಗುವುದರ ಜೊತೆ ತೊಡೆಯ ಭಾಗಕ್ಕೆ ಕಚ್ಚಿ ಗಾಯಗೊಳಿಸಿದರು. ಮೈಮೇಲೆ ಹೊಡೆದು ನೋವು ಮಾಡಿದರು. ಅದಾದ ನಂತರ ಕುತ್ತಿಗೆ ಹಿಡಿದು ಆ ಮಹಿಳೆಯ ಕೊಲೆಗೆ ಪ್ರಯತ್ನಿಸಿದ್ದು, ಈ ವೇಳೆ ಸಂತ್ರಸ್ತೆ ನಾಗೇಶ ಸಿದ್ದಿ ಅವರ ಮೊಬೈಲನ್ನು ತೆಗೆದು ದೂರ ಬಿಸಾಕಿದರು. ಮೊಬೈಲ್ ಹುಡುಕಲು ನಾಗೇಶ ಸಿದ್ದಿ ಹೋದಾಗ ಅಲ್ಲಿಂದ ತಪ್ಪಿಸಿಕೊಂಡರು. ಅದಾಗಿಯೂ ಬೆನ್ನುಬಿದ್ದ ನಾಗೇಶ ಸಿದ್ದಿ ಆ ಸಂತ್ರಸ್ತೆಯ ಬೆನ್ನಿಗೆ ಗುದ್ದಿ ಬೆದರಿಕೆ ಒಡ್ಡಿದರು.
2022ರ ಡಿಸೆಂಬರ್ 12ರಂದು ಫೋನ್ ಮಾಡಿ ಮತ್ತೊಮ್ಮೆ ಬೆದರಿಕೆ ಹಾಕಿದರು. ಈ ವಿಷಯ `ಎಲ್ಲಾದರೂ ಬಾಯ್ಬಿಟ್ಟರೆ ನಿನ್ನ ಕುಟುಂಬದವರನ್ನು ಕೊಲೆ ಮಾಡುವೆ’ ಎಂದು ಹೆದರಿಸಿದರು. ಅದಾಗಿಯೂ ಸಂತ್ರಸ್ತೆ ಧೈರ್ಯವಾಗಿ ಪೊಲೀಸರ ಮೊರೆ ಹೋದರು. ಅಂದಿನ ಯಲ್ಲಾಪುರ ಪಿಐ ಸುರೇಶ ಯಳ್ಳೂರು ಪ್ರಕರಣ ದಾಖಲಿಸಿ ತನಿಖೆ ನಡೆಸಿದರು. ಶಿರಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪಬ್ಲಿಕ್ ಪ್ರೋಸಿಕ್ಯೂಟರ್ ರಾಜೇಶ ಮಳಗಿಕರ್ ವಾದ ಮಂಡಿಸಿದರು. ಹೆಣ್ಣಿನ ಮೇಲೆ ನಡೆದ ಪೈಶಾಚಿಕ ಕೃತ್ಯವನ್ನು ಕಟುವಾಗಿ ಖಂಡಿಸಿದರು. ಪ್ರಕರಣದ ಗಂಭೀರತೆ ಅರಿತ ನ್ಯಾಯಾಧೀಶ ಕಿರಣ ಕೇಣಿ ಅವರು ನಾಗೇಶ ಸಿದ್ದಿ ಅವರಿಗೆ ಶಿಕ್ಷೆ ಪ್ರಕಟಿಸಿದರು. ಅತ್ಯಾಚಾರಿ ನಾಗೇಶ ಸಿದ್ದಿಗೆ 10 ವರ್ಷ ಜೈಲು ಹಾಗೂ 15 ಸಾವಿರ ರೂ ದಂಡ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಜೊತೆಗೆ ಸಂತ್ರಸ್ತೆಗೆ 25 ಸಾವಿರ ರೂ ಪರಿಹಾರ ನೀಡುವಂತೆಯೂ ಸೂಚಿಸಿದೆ.
