ಮುಂಡಗೋಡಿನ ಬಸವರಾಜ ಪಾಟೀಲ ಅವರ ಮನೆಯಲ್ಲಿದ್ದ ಟಿವಿ ಹಾಳಾಗಿದ್ದು, ಹುಬ್ಬಳ್ಳಿಯ ಸರ್ವಿಸ್ ಸೆಂಟರಿನವರು ಅದನ್ನು ರಿಪೇರಿ ಮಾಡಿಕೊಟ್ಟಿಲ್ಲ. ಈ ಬಗ್ಗೆ ಪದೇ ಪದೇ ಪ್ರಶ್ನಿಸಿದ ಕಾರಣ ಬಸವರಾಜ ಪಾಟೀಲ ಅವರಿಗೆ ಜೀವ ಬೆದರಿಕೆ ಬಂದಿದೆ!
ಮುoಡಗೋಡದ ಕೊಪ್ಪದಲ್ಲಿರುವ ಬಸವರಾಜ ಪಾಟೀಲ್ ಅವರ ಮನೆಯಲ್ಲಿದ್ದ ಎಲ್ ಜಿ ಟಿವಿ ಕಳೆದ ವರ್ಷ ಹಾಳಾಯಿತು. ಆ ಟಿವಿಯ ರಿಪೇರಿಗೆ ಅವರು ಅದನ್ನು ಹುಬ್ಬಳ್ಳಿಗೆ ತೆಗೆದುಕೊಂಡು ಹೋದರು. ಅಲ್ಲಿನ ಕಿರಣ ಸರ್ವಿಸ ಸೆಂಟರ್ ಮೂಲಕ ಟಿವಿಯನ್ನು ರೈ ಎಲ್ಜಿ ಟಿವಿ ಶೋರೂಮಿಗೆ ನೀಡಿದರು.
ಅದಾದ ನಂತರ ಟಿವಿ ರಿಪೇರಿ ಆಗಿದೆಯಾ? ಎಂದು ಪರಿಶೀಲಿಸಲು ಅವರು ಮೂರು ಬಾರಿ ಹುಬ್ಬಳ್ಳಿಗೆ ಹೋಗಿದ್ದರು. ಆದರೆ, ಅವರ ಟಿವಿಯನ್ನು ಮಾತ್ರ ಅಲ್ಲಿನವರು ರಿಪೇರಿ ಮಾಡಿರಲಿಲ್ಲ. ಅಗಸ್ಟ 21ರಂದು ಫೋನ್ ಮಾಡಿ ಅವರು ಟಿವಿ ಬಗ್ಗೆ ವಿಚಾರಿಸಿದರು. ಆಗ, ಅಲ್ಲಿನವರು `ನಿನ್ನ ಟಿವಿಯನ್ನು ಇದ್ದ ಸ್ಥಿತಿಯಲ್ಲಿಯೇ ತೆಗೆದುಕೊಂಡು ಹೋಗು’ ಎಂದು ಹೇಳಿದರು.
ಟಿವಿ ರಿಪೇರಿ ಮಾಡದೇ ಅಲೆದಾಡಿಸಿದ ಬಗ್ಗೆ ಪೊಲೀಸ್ ದೂರು ನೀಡುವುದಾಗಿ ಬಸವರಾಜ ಪಾಟೀಲ ಎಚ್ಚರಿಸಿದರು. ಆಗ, ಶೋ ರೂಮಿನ ಮ್ಯಾನೇಜರ್, ಕಿರಣ ಸರ್ವಿಸ ಸೆಂಟರ್ ಸೀನಿಯರ್ ಮ್ಯಾನೇಜರ್, ಅಲೋಕ ಹಾಗೂ ಸರ್ವಿಸ್ ಸೆಂಟರ್ ಅಸಿಸ್ಟೆಂಡ್ ಪ್ರಸಾದ ಎಂಬಾತರು ಸೇರಿ ಬಸವರಾಜ ಪಾಟೀಲ ಅವರಿಗೆ ಬೆದರಿಕೆ ಒಡ್ಡಲು ಶುರು ಮಾಡಿದರು. `ಪೊಲೀಸ್ ದೂರು ಕೊಟ್ಟರೆ ನಿನ್ನ ಜೀವ ತೆಗೆಯುವೆ’ ಎಂದು ಅವರೆಲ್ಲರೂ ಹೆದರಿಸಿದರು.
ಇದರಿಂದ ಇನ್ನಷ್ಟು ಸಿಟ್ಟಾದ ಬಸವರಾಜ ಪಾಟೀಲ್ ಅವರು ಮುಂಡಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಅದಾದ ನಂತರ ನ್ಯಾಯಾಲಯದ ಮೊರೆ ಹೋಗಿ ಎದುರುದಾರರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರ ಮೇಲೆ ಒತ್ತಡ ತಂದರು. ಪೊಲೀಸರು ಪ್ರಕರಣ ದಾಖಲಿಸಿದರು.
Discussion about this post