ಬಡತನದಲ್ಲಿಯೇ ಬದುಕು ಕಟ್ಟಿಕೊಂಡಿದ್ದ ಹಳ್ಳಿ ಹೈದರಿಗೆ ಟಿವಿಯಲ್ಲಿ ಬರುವ ರಿಯಾಲಿಟಿ ಶೋಗಳು ಕ್ಷಣಿಕ ಕಾಲದ ಐಷಾರಾಮಿ ಜೀವನ ಕಲ್ಪಿಸುತ್ತಿವೆ. ರಿಯಾಲಿಟಿ ಶೋ ಮುಗಿದ ನಂತರ ಆ ಹಳ್ಳಿ ಹೈದರು ಬೀದಿಗೆ ಬರುತ್ತಿದ್ದು, ಮೊದಲು ಅನುಭವಿಸಿದ್ದ ಬಡತನದ ಬದುಕಿಗೆ ಮರಳಲಾಗದೇ ಅಡ್ಡದಾರಿ ಹಿಡಿಯುತ್ತಿದ್ದಾರೆ.
ರಿಯಾಲಿಟಿ ಶೋ ಮೂಲಕ ರಾಜ್ಯದ ಗಮನಸೆಳೆದಿದ್ದ ಉತ್ತರ ಕನ್ನಡ ಜಿಲ್ಲೆಯ ಚಂದ್ರಶೇಖರ ಸಿದ್ದಿ ಹಾಗೂ ಭಾಸ್ಕರ ಸಿದ್ದಿ ಅವರದ್ದು ಇದೇ ಕಥೆ. ಮದ್ಯದ ದಾಸರಾಗಿದ್ದ ಚಂದ್ರಶೇಖರ ಸಿದ್ದಿ ಸಮಸ್ಯೆಗಳ ಒಳಗೆ ಸಿಲುಕಿ ಸಾವನಪ್ಪಿದ್ದಾರೆ. ಭಾಸ್ಕರ ಸಿದ್ದಿ ಇದೀಗ ಕಳ್ಳತನ ಮಾಡುವುದನ್ನು ಕಸುಬು ಮಾಡಿಕೊಂಡಿದ್ದಾರೆ. ತಮ್ಮೊಳಗಿನ ಕಲೆ, ಪ್ರತಿಭೆ ಮುಗ್ದತೆಯಿಂದ ಬಣ್ಣದ ಬದುಕು ಪ್ರವೇಶಿಸಿ ದಿಢೀರ್ ದುಡ್ಡು ನೋಡಿದವರು ದುಡ್ಡು ಖಾಲಿ ಆದಾಗ ಖಿನ್ನತೆಗೆ ಒಳಗಾಗುತ್ತಿದ್ದಾರೆ. ದುಶ್ಚಟಗಳ ಜೊತೆ ತಮ್ಮ ಭವಿಷ್ಯದ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಬಳಿಯ ಚಂದ್ರಶೇಖರ ಸಿದ್ದಿ `ಕಾಮಿಡಿ ಕಿಲಾಡಿಗಳು’ ಮೂಲಕ ಗಮನಸೆಳೆದಿದ್ದರು. ರಿಯಾಲಿಟಿ ಶೋ ಅವಧಿಯಲ್ಲಿ ಅವರು ಐಷಾರಾಮಿ ಬದುಕು ಸಾಗಿಸಿದ್ದು, ಅದಾದ ನಂತರ ಮತ್ತೆ ಬೀದಿಗೆ ಬಂದರು. ಸೂಕ್ತ ಅವಕಾಶ ಸಿಗದೇ ಮಾನಸಿಕವಾಗಿ ಕುಗ್ಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಕೌಟುಂಬಿಕ ಕಲಹ ಹಾಗೂ ಹಣಕಾಸು ಸಮಸ್ಯೆ ಪರಿಣಾಮ ಅವರು ಆತ್ಮಹತ್ಯೆಗೆ ಶರಣಾದರು.
ಅಂಕೋಲಾ ತಾಲೂಕಿನ ಹಳ್ಳವಳ್ಳಿಯ ಭಾಸ್ಕರ ಸಿದ್ದಿ `ಹಳ್ಳಿ ಹೈದ ಪ್ಯಾಟೆಗೆ ಬಂದ’ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ರಿಯಾಲಿಟಿ ಶೋ ಮುಗಿದ ನಂತರ ಅವರು ಕಳ್ಳತನ ಮಾಡುವುದನ್ನು ತಮ್ಮ ಕೆಲಸವನ್ನಾಗಿಸಿ ಮಾಡಿಕೊಂಡರು. ನಾಲ್ಕು ಬಾರಿ ಕಳ್ಳತನ ಪ್ರಕರಣದಲ್ಲಿ ಅವರು ಸಿಕ್ಕಿ ಬಿದ್ದರು. ಜಾಮೀನಿನ ಮೇಲೆ ಹೊರ ಬಂದ ಮರುದಿನವೇ ಮತ್ತೆ ಕಳ್ಳತನ ಮುಂದುವರೆಸಿದರು. ಕಳ್ಳತನ ಆರೋಪದ ಅಡಿ ಭಾಸ್ಕರ ಸಿದ್ದಿ ಅವರನ್ನು ಪೊಲೀಸರು ಮತ್ತೆ ಬಂಧಿಸಿದ್ದು, ಕಳ್ಳತನದ ಚಟದಿಂದ ಹೊರ ಬರಲು ಅವರಿಂದ ಸಾಧ್ಯವಾಗುತ್ತಿಲ್ಲ.
ರಿಯಾಲಿಟಿ ಶೋಗಳು ಮುಗ್ದ ಜನರ ಬದುಕು ಹಾಳು ಮಾಡಿದ್ದು ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಹಳ್ಳಿ ಹೈದ ರಾಜೇಶ ಸಹ ರಿಯಾಲಿಟಿ ಶೋ ಮೂಲಕ ಜನರ ಮನಗೆದ್ದು, ನಂತರ ಸಾವಿಗೆ ಶರಣಾಗಿದ್ದರು. ಹಳ್ಳಿ ಹೈದ ರಾಜೇಶ ಗಿರಿಜನ ಸಮುದಾಯದವರಾಗಿದ್ದು, ಚಂದ್ರಶೇಖರ ಸಿದ್ದಿ ಹಾಗೂ ಭಾಸ್ಕರ ಸಿದ್ದಿ ಬಡಕಟ್ಟು ಸಂಸ್ಕೃತಿಯ ಹಿನ್ನಲೆಯವರಾಗಿದ್ದಾರೆ. ರಿಯಾಲಿಟಿ ಶೋ ಆಯೋಜಕರು ಹಿಂದುಳಿದ ಸಮುದಾಯದವರನ್ನು ಗುರಿಯಾಗಿರಿಸಿಕೊಂಡು ಅವರಿಗೆ ಬಣ್ಣದ ಬದುಕು ಕಲಿಸಿ ಅರ್ದ ದಾರಿಗೆ ಕೈ ಬಿಡುತ್ತಿವೆ. ಅದರ ಪರಿಣಾಮ ಅನೇಕ ಪ್ರತಿಭೆಗಳು ಅರಳುವ ಮುನ್ನವೇ ಬಾಡುತ್ತಿವೆ.
Discussion about this post