ಹೊನ್ನಾವರದಲ್ಲಿ ಬೋಟಿಂಗ್ ಕೆಲಸ ಮಾಡುತ್ತಿದ್ದ ಗೌರೀಶ ಗೌಡ ಅವರಿಗೆ ಮೋಹನ ಗೌಡ ಹಾಗೂ ಗಣೇಶ ಗೌಡ ಎಂಬಾತರು ಹಿಡಿದು ಥಳಿಸಿದ್ದಾರೆ. ಥಳಿತಕ್ಕೆ ಒಳಗಾದ ಗೌರೀಶ ಗೌಡ ಅವರು ಎರಡು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದು ಮನೆಗೆ ಮರಳಿದ್ದಾರೆ.
ಹೊನ್ನಾವರದ ಮಾವಿನಕೂರ್ವಾ ಬಳಿಯ ಅಂಗಡಿಹಿತ್ಲುವಿನಲ್ಲಿ ಗೌರೀಶ ಗೌಡ ಅವರು ವಾಸವಾಗಿದ್ದರು. ಬೋಟ್ ಕೆಲಸ ಮಾಡಿಕೊಂಡು ಅವರು ಜೀವನ ನಡೆಸುತ್ತಿದ್ದರು. ಅದೇ ಊರಿನ ಮೋಹನ ಗೌಡ ಹಾಗೂ ಗಣೇಶ ಗೌಡ ಸಹ ಬೋಟಿನಲ್ಲಿ ಕೆಲಸ ಮಾಡುತ್ತಿದ್ದು, ಗೌರೀಶ ಗೌಡ ಅವರ ಕುಟುಂಬವನ್ನು ಕಂಡರೆ ಅವರಿಬ್ಬರಿಗೂ ಆಗುತ್ತಿರಲಿಲ್ಲ. ಹೀಗಾಗಿ ಸದಾ ಗೌರೀಶ ಗೌಡರ ವಿರುದ್ಧ ದ್ವೇಷ ಕಾರುತ್ತಿದ್ದರು.
ಸೆಪ್ಟೆಂಬರ್ 6ರ ರಾತ್ರಿ 12ಗಂಟೆಗೆ ಮಾವಿನಕುರ್ವಾ ಅಂಗಡಿಹಿತ್ಲುವಿನ ಸಾರ್ವಜನಿಕ ಗಣೇಶ ಉತ್ಸವ ಮಂದಿರದ ಬಳಿ ಗೌರೀಶ ಗೌಡ ಅವರು ಬೈಕ್ ನಿಲ್ಲಿಸಿದ್ದರು. ಅದಾದ ನಂತರ ಅವರು ಮನೆ ಕಡೆ ನಡೆದು ಹೋಗುವಾಗ ಮೋಹನ ಗೌಡ ಹಾಗೂ ಗಣೇಶ ಗೌಡ ಸೇರಿ ತಡೆದರು. `ಊರಿನಲ್ಲಿ ನಿನ್ನ ರಾಜಕೀಯ ಜಾಸ್ತಿ ಆಗಿದೆ’ ಎಂದು ಗೌರೀಶ ಗೌಡರನ್ನು ಅವರಿಬ್ಬರು ಅಡ್ಡಗಟ್ಟಿ ಬೈಗಳ ಶುರು ಮಾಡಿದರು.
ಅದಾದ ನಂತರ ಗೌರೀಶ ಗೌಡ ಅವರನ್ನು ನೆಲಕ್ಕೆ ದೂಡಿ ಥಳಿಸಿದರು. ಬಡಿಗೆಯಿಂದಲೂ ಬಾರಿಸಿದರು. ಆಗ ಮಾರುತಿ ಗೌಡ, ಸಂದೀಪ ಗೌಡ, ನಾಗೇಶ ಗೌಡ ಅವರು ಗೌರೀಶ ಗೌಡರನ್ನು ರಕ್ಷಿಸಲು ಆಗಮಿಸಿದರು. ಆ ಮೂವರು ಬರುತ್ತಿರುವದ್ನು ನೋಡಿದ ಈ ಇಬ್ಬರು ಅಲ್ಲಿಂದ ಪರಾರಿಯಾದರು. ಆ ಮೂವರು ಸೇರಿ ಗೌರೀಶ ಗೌಡ ಅವರನ್ನು ರಿಕ್ಷಾ ಮೇಲೆ ಕರೆದೊಯ್ದು ಸಂತ ಇಗ್ನೋಶಿಯನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು. ಅದಾದ ನಂತರ ತಾಲೂಕು ಆಸ್ಪತ್ರೆಗೆ ದಾಖಲಿಸಿದರು.
ಇದೀಗ ಚೇತರಿಸಿಕೊಂಡ ಗೌರೀಶ ಗೌಡ ಅವರು ಮೋಹನ ಗೌಡ ಹಾಗೂ ಗಣೇಶ ಗೌಡ ಅವರ ವಿರುದ್ಧ ದೂರು ನೀಡಿದ್ದಾರೆ. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.
