ಸಾಕಷ್ಟು ಗುದ್ದಾಟ-ಹೋರಾಟ ನಡೆಸಿ ಕಾರವಾರ ಮೆಡಿಕಲ್ ಕಾಲೇಜಿನ ನಿರ್ದೇಶಕ ಸ್ಥಾನಕ್ಕೆ ಬಂದಿದ್ದ ಡಾ ಗಜಾನನ ನಾಯಕ ಅವರು ಆ ಹುದ್ದೆಯಿಂದ ನಿವೃತ್ತರಾಗಿ ವರ್ಷ ಕಳೆದಿದೆ. ಆದರೆ, ಅವರ ಅಧಿಕಾರ ಅವಧಿಯಲ್ಲಿ ನಡೆದ ದೌರ್ಜನ್ಯ ಇದೀಗ ಅವರಿಗೆ ಕಂಟಕವಾಗಿ ಪರಿಣಮಿಸಿದೆ!
ಡಾ ಗಜಾನನ ನಾಯಕ ಅವರು ತಮ್ಮ ಅಧಿಕಾರ ಅವಧಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಮೇಲೆ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಿದ ಆರೋಪ ಎದುರಿಸಿದ್ದರು. ಆ ಆರೋಪ ತನಿಖೆಯಲ್ಲಿ ಸಾಭೀತಾಗಿದ್ದು, ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದಿಂದ ಡಾ ಗಜಾನನ ನಾಯಕ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಸೂಚನೆ ಬಂದಿದೆ. ಸೆ 3ರಂದು ರವಾನಿಸಿದ ಈ ಪತ್ರದಲ್ಲಿ 7 ದಿನಗಳ ಒಳಗೆ ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ.
ಕಾರವಾರದ ಕ್ರಿಮ್ಸ್ ವೈದ್ಯಕೀಯ ಕಾಲೇಜಿನ ಡಾ ಸಂದೀಪ ಎನ್ ಅವರು 2023ರ ಜೂನ್ 12ರಂದು ಕ್ರಿಮ್ಸ್ ನಿರ್ದೇಶಕ ಡಾ ಗಜಾನನ ನಾಯಕ ವಿರುದ್ಧ ದೂರು ನೀಡಿದ್ದರು. `ಕಾರವಾರ ಮೆಡಿಕಲ್ ಕಾಲೇಜು ನಿರ್ದೇಶಕರು ಪರಿಶಿಷ್ಟ ಜಾತಿ ಹಾಗೂ ಸಮುದಾಯದ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು ನೀಡದೇ ಸತಾಯಿಸುತ್ತಿದ್ದಾರೆ’ ಎಂದು ದೂರಿದ್ದರು. 2025ರ ಮೇ 5ರಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯ ವಡ್ಡೆ ಪಳ್ಳಿ ರಾಮಚಂದ್ರ ಅವರ ನೇತೃತ್ವದಲ್ಲಿ ವಿಚಾರಣೆ ನಡೆದಿತ್ತು.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ 2024ರ ಮಾರ್ಚ್ 12ರಂದು ವರದಿ ಸಲ್ಲಿಕೆಯಾಗಿದ್ದು ಅದರನ್ವಯ ಇದೀಗ ಕಾನೂನು ಕ್ರಮವಾಗಿದೆ. ಈಗಾಗಲೇ ಡಾ ಗಜಾನನ ನಾಯಕ ಅವರ ನಿವೃತ್ತಿ ಸೌಲಭ್ಯವನ್ನು ಸರ್ಕಾರ ತಡೆಹಿಡಿದಿದೆ.
