ಯಲ್ಲಾಪುರದ ಕಿರವತ್ತಿ ಬಳಿಯ ಡೊಮಗೇರಿ ಅಂಗನವಾಡಿ ಬಳಿ ಮರವೊಂದು ದಿಢೀರ್ ಆಗಿ ಕುಸಿದು ಬಿದ್ದಿದೆ. ಮರದ ಅಡಿ ಸಿಲುಕಿ ಗರ್ಭಿಣಿಯೊಬ್ಬರು ಸಾವನಪ್ಪಿದ್ದಾರೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಸೋಮವಾರ ಮಕ್ಕಳೆಲ್ಲರೂ ಖುಷಿಯಿಂದ ಅಂಗನವಾಡಿಗೆ ಬಂದಿದ್ದರು. ಸಂಜೆ ಅಂಗನವಾಡಿಯಿoದ ಮನೆಗೆ ಮರಳುವ ವೇಳೆ ದಾರಿಯಲ್ಲಿದ್ದ ಆಲದ ಮರ ಕುಸಿದು ಬಿದ್ದಿತು. ದೊಡ್ಡ ಮರ ದಿಢೀರ್ ಆಗಿ ಕುಸಿದ ಪರಿಣಾಮ ಮಕ್ಕಳ ಜೊತೆ ಗರ್ಭಿಣಿಯೊಬ್ಬರು ಮರದ ಅಡಿ ಸಿಲುಕಿದರು. ಗರ್ಭಿಣಿಯನ್ನು ಹೊರತೆಗೆಯುವರದೊಳಗೆ ಅವರು ಅಲ್ಲಿಯೇ ಕೊನೆಯುಸಿರೆಳೆದಿದ್ದರು. ಸಾವಿತ್ರಿ ಖರಾತ ಸಾವನಪ್ಪಿದ ಮಹಿಳೆ.
ಐದು ತಿಂಗಳ ಗರ್ಭಿಣಿಯಾಗಿದ್ದ ಸಾವಿತ್ರಿ ಖರಾತ (28) ಅವರು ತಮ್ಮ ಮಗುವನ್ನು ಅಂಗನವಾಡಿಯಿoದ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ದುರಂತ ನಡೆದಿದೆ. ಈ ಅವಘಡದಲ್ಲಿ ಸ್ವಾತಿ ಬಾಬು ಖರಾತ (17), ಘಾಟು ಲಕ್ಕು ಕೊಕರೆ (5), ಶ್ರಾವಣಿ ಬಾಬು ಖರಾತ (2), ಶಾಂಭವಿ ಬಾಬು ಖರಾತ್ (4.1) ಎಂಬಾತರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಸಾನ್ವಿ ಬಾಬು ಕೊಕರೆ (5), ವಿನಯ ಲಕ್ಕು ಕೊಕರೆ, (5), ಅನುಶ್ರೀ ಮಾಂಬು ಕೊಕರೆ (5) ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯಲ್ಲಾಪುರ ಆಸ್ಪತ್ರೆಯ ಆಂಬುಲೆನ್ಸ್ ಚಾಲಕರು ಸಮಯಪ್ರಜ್ಞೆ ಮೆರೆದು ಸ್ಥಳಕ್ಕೆ ದೌಡಾಯಿಸಿದ್ದಾರೆ. ವೈದ್ಯಾಧಿಕಾರಿ ಡಾ ನರೇಂದ್ರ ಪವಾರ್ ಅವರು ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದು, ಸದ್ಯ ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್’ಗೆ ದಾಖಲಿಸಲಾಗಿದೆ
ಪಿಐ ರಮೇಶ ಹಾನಾಪುರ ಅವರು ಸ್ಥಳದಲ್ಲಿಯೇ ಬೀಡು ಬಿಟ್ಟು ರಕ್ಷಣಾ ಚಟುವಟಿಕೆ ನಡೆಸುತ್ತಿದ್ದಾರೆ. ಅವಘಡದ ವಿಷಯ ತಿಳಿದು ಅನೇಕರು ಸ್ಥಳಕ್ಕೆ ತೆರಳಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿದ್ಯುತ್ ತಂತಿಯ ಮೇಲೆಯೂ ಮರ ಬಿದ್ದಿದ್ದರಿಂದ ಹೆಸ್ಕಾಂ ಸಿಬ್ಬಂದಿಯೂ ಅಲ್ಲಿದ್ದಾರೆ. ಶಾಸಕ ಶಿವರಾಮ ಹೆಬ್ಬಾರ್, ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಇನ್ನಿತರ ಪ್ರಮುಖರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವಾನ ಹೇಳಿದರು.
