ಶಿರಸಿಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಸಂತೋಷ್ ಆರೇರ್ ಏಕಾಏಕಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಮೊನ್ನೆ ಕಾರಿನಿಂದ ಹಾರಿ ಅರಣ್ಯಕ್ಕೆ ಓಡಿ ಹೋಗಿದ್ದ ಅವರ ಶವ ಕಾಡಿನಲ್ಲಿ ಸಿಕ್ಕಿದೆ.
ಬನವಾಸಿ ಬಳಿಯ ಚಿಪಗಿ ಕೆಳಗಿನ ಎಸಳೆಯಲ್ಲಿ ಸಂತೋಷ್ ಆರೇರ್ ವಾಸವಾಗಿದ್ದರು. ಕೃಷಿ ಕೆಲಸ ಮಾಡಿಕೊಂಡಿದ್ದ ಅವರು ಎಲ್ಲರಂತೆಯೇ ಸಹಜವಾಗಿದ್ದರು. ಕಳೆದ ಒಂದು ವಾರದಿಂದ ಅವರು ಏಕಾಏಕಿ ಖಿನ್ನತೆಗೆ ಒಳಗಾದರು. ಮಾನಸಿಕ ಅಸ್ವಸ್ಥರಂತೆ ವರ್ತಿಸಲು ಶುರು ಮಾಡಿದರು.
ಸೆ 4ರಂದು ಮಂಜಾ ಆರೇರ್ ಅವರ ಮನೆಗೆ ಬಂದ ಸಂಬoಧಿ ನಾಗರಾಜ ಕಲಕೊಪ್ಪ ಅವರು ಮಂಜಾ ಆರೇರ್ ಅವರ ಮಗ ಸಂತೋಷ್ ಆರೇರ್ ಅವರ ಪರಿಸ್ಥಿತಿ ನೋಡಿದರು. `ವಾತಾವರಣ ಬದಲಾವಣೆ ಮಾಡಿದರೆ ಸಂತೋಷ್ ಆರೇರ್ ಅವರ ಮನಸ್ಸು ಸರಿ ಆಗಬಹುದು’ ಎಂದು ಅವರು ಅಂದಾಜಿಸಿದರು. ಹೀಗಾಗಿ ನಾಗರಾಜ ಕಲಕೊಪ್ಪ ಅವರು ಸಂತೋಷ್ ಆರೇರ್ ಅವರನ್ನು ಸೊರಬದಲ್ಲಿರುವ ತಮ್ಮ ಮನೆಗೆ ಕೊಂಡೊಯ್ದರು.
ನಾಗರಾಜ ಕಲಕೊಪ್ಪ ಅವರ ಮನೆಯಲ್ಲಿ ಸಂತೋಷ್ ಆರೇರ್ ಸಾಕಷ್ಟು ಗಲಾಟೆ ಮಾಡಿದರು. ರಾತ್ರಿ ಊಟ ಮಾಡಿ ಮಲಗುವ ಬದಲು ಎಲ್ಲಡೆ ಓಡಾಟ ಶುರು ಮಾಡಿದರು. ಕಂಡ ಕಂಡವರನ್ನು ಬೈಯಲು ಪ್ರಾರಂಭಿಸಿದ್ದು, ಅವರ ಕಾಟ ಸಹಿಸಲಾಗದೇ ನಾಗರಾಜ ಕಲಕೊಪ್ಪ ಅವರು ಮತ್ತೆ ಶಿರಸಿಗೆ ತಂದುಬಿಡುವ ಪ್ರಯತ್ನ ನಡೆಸಿದರು.
ಸೆ 6ರಂದು ಓಮಿನಿ ಕಾರಿನ ಮೂಲಕ ಸಂತೋಷ ಅವರನ್ನು ಶಿರಸಿಗೆ ಕರೆ ತರುತ್ತಿರುವಾಗ ಮರೆಗುಡ್ಡಿ ಬಸ್ ನಿಲ್ದಾಣದ ಬಳಿ ದೊಡ್ಡ ಗುಂಡಿ ಕಾಣಿಸಿತು. ಹೀಗಾಗಿ ಆ ಓಮಿನಿ ನಿಧಾನವಾಯಿತು. ಆಗ, ಸಂತೋಷ್ ಆರೇರ್ ಓಮಿನಿಯಿಂದ ಕೆಳಗೆ ಹಾರಿ ಕಾಡಿನಲ್ಲಿ ಓಡಿ ಪರಾರಿಯಾದರು. ಎಷ್ಟು ಹುಡುಕಿದರೂ ಅವರು ಸಿಗಲಿಲ್ಲ. ಹೀಗಾಗಿ ಸಂತೋಷ್ ತಂದೆ ಮಂಜಾ ಆರೇರ್ ಪೊಲೀಸರ ನೆರವುಪಡೆದು ಹುಡುಕಾಟ ನಡೆಸಿದರು. ಈ ದಿನ ಅದೇ ಅರಣ್ಯ ಪ್ರದೇಶದಲ್ಲಿ ಸಂತೋಷ್ ಆರೇರ್ ಅವರ ಶವ ಸಿಕ್ಕಿದೆ. ಸಂತೋಷ ಆರೇರ್ ನೇಣಿಗೆ ಶರಣಾಗಿದ್ದಾರೆ.
