ಹಲವು ಹಂತದ ಆರೋಪಗಳನ್ನು ಎದುರಿಸುತ್ತಿದ್ದ ಕಾರವಾರದ ಚಿತ್ತಾಕುಲ ಪಿಎಸ್ಐ ಮಹಾಂತೇಶ ವಾಲ್ಮೀಕಿ ಅವರನ್ನು ಸರ್ಕಾರ ಅಲ್ಲಿಂದ ವರ್ಗಾವಣೆ ಮಾಡಿದೆ. ತಕ್ಷಣ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಪೊಲೀಸ್ ಅಧೀಕ್ಷಕ ದೀಪನ ಎಂ ಎನ್ ಅವರಿಗೆ ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಅಮಿತ್ ಸಿಂಗ್ ಅವರು ಸೂಚಿಸಿದ್ದಾರೆ.
ಮಹಾಂತೇಶ ವಾಲ್ಮೀಕಿ ಅವರು ಕಳೆದ ಮೂರು ವರ್ಷಗಳಿಂದ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ಆಗಿ ಕೆಲಸ ಮಾಡುತ್ತಿದ್ದರು. ಜನರ ಮೇಲೆ ದೌರ್ಜನ್ಯ, ಭ್ರಷ್ಟಾಚಾರ, ಅಕ್ರಮ ಸರಾಯಿ ಸಾಗಾಟಗಾರರಿಗೆ ಬೆಂಬಲ ಸೇರಿ ವಿವಿಧ ಆರೋಪಗಳನ್ನು ಅವರು ಎದುರಿಸುತ್ತಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಕ್ಷಯ್ ಎಸ್ ಬಿ ಅವರು ಮಹಾಂತೇಶ ವಾಲ್ಮೀಕಿ ಅವರ ವಿರುದ್ಧ ಅಧಿಕೃತ ದೂರು ಸಲ್ಲಿಸಿದ್ದರು. ಇದರ ಜೊತೆ ವಿವಿಧ ದಾಖಲೆಗಳನ್ನು ಸಹ ಒದಗಿಸಿದ್ದರು.
ಮಹಾಂತೇಶ ವಾಲ್ಮೀಕಿ ಅವರನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಸಹ ಕೆಲವರು ಮನವಿ ಸಲ್ಲಿಸಿದ್ದರು. ಮಹೇಂತಶ ವಾಲ್ಮೀಕಿ ಅವರ ವಿರುದ್ಧವಾಗಿಯೂ ಸರ್ಕಾರಕ್ಕೆ ದೂರುಗಳು ಸಲ್ಲಿಕೆಯಾಗಿದ್ದವು. ಮೊದಲು ದೂರು ನೀಡಿದ ಕೆಲವರು ನಂತರ ಉಲ್ಟಾ ಹೊಡೆದಿದ್ದು ಸಹ ಗೊಂದಲಕ್ಕೆ ಕಾರಣವಾಗಿತ್ತು. ಅದಾಗಿಯೂ ಅಕ್ಷಯ್ ಎಸ್ ಬಿ ಅವರು ವಿವಿಧ ದಾಖಲೆಗಳನ್ನು ಕ್ರೂಡಿಕರಿಸಿ ಹೋರಾಟ ಮುಂದುವರೆಸಿದ್ದರು. ದೂರು ನೀಡಿದ ಕಾರಣ ತಮಗೆ ಆಮೀಷ ಹಾಗೂ ಬೆದರಿಕೆ ಒಡ್ಡಿದ ಬಗ್ಗೆಯೂ ಅಕ್ಷಯ ಎಸ್ ಬಿ ಅವರು ಹೇಳಿದ್ದರು.
ಲಭ್ಯ ದಾಖಲೆ, ದೂರಿನ ಪರಿಶೀಲನೆ ನಡೆಸಿದ ಪೊಲೀಸ್ ಅಧೀಕ್ಷಕರು ಈ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಈ ಎಲ್ಲಾ ಹಿನ್ನಲೆ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಅಮಿತ್ ಸಿಂಗ್ ಅವರು ಸೆಪ್ಟೆಂಬರ್ 9ರಂದು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಠಿ ಕಾರಣದಿಂದ ಪಿಎಸ್ಐ ಮಹಾಂತೇಶ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಸದ್ಯ ಮಹಾಂತೇಶ ವಾಲ್ಮೀಕಿ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
