ವಿವಿಧ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿರುವ ನಿವೃತ್ತ ಶಿಕ್ಷಕ ಬಿ ಶರಣಪ್ಪನವರ ಸಾಧನೆ ಗುರುತಿಸಿ ಶಿಕ್ಷಕರ ದಿನಾಚರಣೆ ಅವಧಿಯಲ್ಲಿ ಅವರನ್ನು ಗೌರವಿಸಲಾಗಿದೆ.
ಬಿ ಶರಣಪ್ಪ ಅವರು ದಾವಣಗೆರೆ ಜಿಲ್ಲೆಯ ಫಲವನಹಳ್ಳಿ ಗ್ರಾಮದವರಾಗಿದ್ದು, ತಾವು ಸ್ಥಾಪಿಸಿದ ಶ್ರೀ ಲಕ್ಷ್ಮಿ ರಂಗನಾಥ ಎಜುಕೇಶನಲ್ ಟ್ರಸ್ಟಿನ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಸ್ವಂತ ಊರಾದ ದಾವಣಗೆರೆಯಲ್ಲಿಯೂ ಅವರು ಶಾಲೆಯನ್ನು ಸ್ಥಾಪಿಸಿದ್ದಾರೆ. ರಾಜ್ಯದ ನಾನಾ ಊರುಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅವರಿಗೆ ಇದೀಗ 85 ವರ್ಷ. ಅದಾಗಿಯೂ ಈಗಲೂ ಉತ್ಸಾಹಭರಿತರಾಗಿ ಅವರು ಮಕ್ಕಳಿಗೆ ಪಾಠ ಮಾಡುತ್ತಾರೆ.
ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ಬಿ ಶರಣಪ್ಪ ಅವರು ಶಿಕ್ಷಣಕ್ಕಾಗಿ ಕಷ್ಟಪಟ್ಟಿದ್ದು ಅಷ್ಟಿಷ್ಟಲ್ಲ. 8ಕಿಮೀ ನಡೆದು ಶಾಲೆಗೆ ಬರುತ್ತಿದ್ದ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ರೋಚಕ. 29 ವರ್ಷಗಳ ಕಾಲ ಅವರು ಮಕ್ಕಳಿಗೆ ಪಾಠ ಮಾಡಿದ್ದಾರೆ. 1998ರಲ್ಲಿ ನಿವೃತ್ತರಾದ ನಂತರ ಶ್ರೀ ಲಕ್ಷ್ಮಿ ರಂಗನಾಥ ಎಜುಕೇಶನಲ್ ಟ್ರಸ್ಟ್ ಪ್ರಾರಂಭಿಸಿ ಟ್ರಸ್ಟಿನ ಆಶ್ರಯದಲ್ಲಿ ಕಾರವಾರ, ದಾವಣಗೆರೆ ಹಾಗೂ ಶಿರಸಿಯಲ್ಲಿ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ಸ್ಥಾಪಿಸಿ ಗ್ರಾಮೀಣ ಮಕ್ಕಳ ಶೈಕ್ಷಣಿಕ ಸಾಧನೆಗೆ ಕೊಡುಗೆ ನೀಡುತ್ತಿದ್ದಾರೆ.
ಬಿ ಶರಣಪ್ಪ ಅವರ ಶೈಕ್ಷಣಿಕ ಕೊಡುಗೆ ಪರಿಗಣಿಸಿ ಕಾರವಾರದ ಬಾಡ ಶಿವಾಜಿ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಉಮೇಶ್ ಯು ನಾಯಕ್ ಹಾಗೂ ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್ ಸೇರಿ ಅವರನ್ನು ಸನ್ಮಾನಿಸಿದರು. ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಜೈ ರಂಗನಾಥ ಬಿ ಎಸ್, ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಪ್ರಿಯದರ್ಶಿನಿ ಸಾಳುಂಕೆ, ಅಂಕೋಲಾ ಅರ್ಬನ್ ಬ್ಯಾಂಕಿನ ಸಂತೋಷ್ ಬಂಡಿಕಟ್ಟೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆರ್ಪಿ ಗೌಡ, ಶಿವಾಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಎಸ್ ಡಿ ಕದಂ, ಮುಖ್ಯಾಧ್ಯಾಪಕ ಆರ್ ಎಸ್ ನಾಯ್ಕ ಇತರರು ಇದ್ದರು.
