ವಿಷಕಾರಿ ಹಾವು ಕಚ್ಚಿದ ಪರಿಣಾಮ ಯಲ್ಲಾಪುರದ ಶಂಕರ ಭಟ್ಟ ಅವರು ಸಾವನಪ್ಪಿದ್ದಾರೆ. ಯಲ್ಲಾಪುರದ ಸಹಸ್ರಳ್ಳಿಯ ಮೂಡಬೈಲಿನಲ್ಲಿ ಶಂಕರ ಭಟ್ಟ ಅವರು ಕೃಷಿ ಕೆಲಸ ಮಾಡಿಕೊಂಡಿದ್ದರು. ಯಲ್ಲಾಪುರ ಬಸ್ ನಿಲ್ದಾಣದ ಚೌಡೇಶ್ವರಿ ದೇಗುಲದ ಅರ್ಚಕರಾಗಿಯೂ ಅವರು ಸೇವೆ ಮಾಡುತ್ತಿದ್ದರು. ಸೆಪ್ಟೆಂಬರ್ 9ರ ಸಂಜೆ ಅವರು ತೋಟಕ್ಕೆ ಹೋದಾಗ ವಿಷಜಂತು ಕಚ್ಚಿದೆ. ಕುಟುಂಬದವರ ಮಾಹಿತಿ ಪ್ರಕಾರ 67 ವರ್ಷದ ಶಂಕರ ಭಟ್ಟ ಅವರಿಗೆ ಕೃಷ್ಣ ಸರ್ಪ ಕಚ್ಚಿದೆ. ಅವರ ಪಕ್ಕದಮನೆಯವರು ಆಸ್ಪತ್ರೆಗೆ ಕರೆತರುವಷ್ಟರಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಅವರ ಪತ್ನಿ ಕಮಲಾಕ್ಷಿ ಭಟ್ಟ ಅವರು ನೀಡಿದ ದೂರಿನ ಅನ್ವಯ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಚ್ಚಲು ಮನೆಯಲ್ಲಿ ಬಿದ್ದು ವೃದ್ಧ ಸಾವು
ಕೈ ತೊಳೆಯಲು ಬಚ್ಚಲುಮನೆಗೆ ಹೋಗಿದ್ದ ಶಿರಸಿಯ ಪುಂಡಳಿಕ ಶಾನಭಾಗ ಅವರು ಅಲ್ಲಿಯೇ ಜಾರಿಬಿದ್ದು ಸಾವನಪ್ಪಿದ್ದಾರೆ. 70 ವರ್ಷದ ಪುಂಡಳಿಕ ಶಾನಭಾಗ ಅವರು ಹುಬ್ಬಳ್ಳಿ ರಸ್ತೆಯ ದಾಮೋದರ ಚಾಳದಲ್ಲಿ ಒಂಟಿಯಾಗಿ ವಾಸವಾಗಿದ್ದರು. ಸರಾಯಿ ಸೇವನೆ ಚಟಕ್ಕೆ ಅವರು ಅಂಟಿಕೊoಡಿದ್ದರು. ಸೆಪ್ಟೆಂಬರ್ 7ರಂದು ಊಟ ಮುಗಿಸಿ ಕೈ ತೊಳೆಯಲು ಬಚ್ಚಲು ಮನೆಗೆ ಹೋದ ಅವರು ಅಲ್ಲಿ ಜಾರಿ ಬಿದ್ದರು. ಕೆಳಮುಖವಾಗಿ ಬಿದ್ದ ಪರಿಣಾಮ ಅಲ್ಲಿಯೇ ಸಾವನಪ್ಪಿದರು. ಈ ಬಗ್ಗೆ ಸಿದ್ದಾಪುರ ಬೇಡ್ಕಣಿಯ ರಾಜೇಶ ಪೈ ಪೊಲೀಸರಿಗೆ ಮಾಹಿತಿ ನೀಡಿದ್ದು, ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.
ಹಠಾತ್ ಎದೆನೋವು: ಸೀಬರ್ಡ ಉದ್ಯೋಗಿ ಸಾವು
ಕಾರವಾರದ ಸೀಬರ್ಡ ನೌಕಾನೆಲೆ ಉದ್ಯೋಗಿ ಶಿವಶಂಕರ್ ಹೊಸಮನಿ ಅವರು ತಮ್ಮ 36ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ಮಹಾರಾಷ್ಟç ಮೂಲದ ಶಿವಶಂಕರ್ ಹೊಸಮನಿ ಅವರು ಅಮದಳ್ಳಿಯ ಮುದುಗಾದಲ್ಲಿ ವಾಸವಾಗಿದ್ದರು. ಸೀಬರ್ಡನಲ್ಲಿ ಅವರು ಮಿಶನಿಷ್ಟ್ ಆಗಿ ಕೆಲಸ ಮಾಡುತ್ತಿದ್ದರು. ಸೆಪ್ಟೆಂಬರ್ 7ರಂದು ಕಾರವಾರ ಬಸ್ ನಿಲ್ದಾಣದ ಬಳಿ ಅವರಿಗೆ ದಿಢೀರ್ ಆಗಿ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯ ಹಾಸಿಗೆ ಮೇಲೆ ನರಳಾಟ ನಡೆಸಿದ ಅವರು ಅಲ್ಲಿಯೇ ಕೊನೆಯುಸಿರೆಳೆದರು. ಪತಿ ಸಾವಿನ ಬಗ್ಗೆ ಸ್ವಾತಿ ಹೊಸಮನಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಗೆ ಬಿದ್ದ ಕೃಷಿಕ ಸಾವು
ಕುಮಟಾದ ಮಂಜುನಾಥ ಮಡಿವಾಳ ಅವರು ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಕುಮಟಾದ ವಾಲಗಳ್ಳಿ ಹಾರೋಡಿಯ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಬಳಿ ಮಂಜುನಾಥ ಮಡಿವಾಳ ಅವರು ಕೃಷಿ ಕೆಲಸ ಮಾಡಿಕೊಂಡು ಬದುಕುತ್ತಿದ್ದರು. ಸೆಪ್ಟೆಂಬರ್ 7ರಂದು ಅವರು ತೋಟಕ್ಕೆ ಹೋದಾಗ ಕಾಲು ಜಾರಿ ಬಾವಿಗೆ ಬಿದ್ದರು. ಮೇಲೆ ಬರಲಾಗದೇ ಅಲ್ಲಿಯೇ ಸಾವನಪ್ಪಿದರು. ಹನಮಂತ ಮಡಿವಾಳ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
