ಹೊನ್ನಾವರದ ರಾಮತೀರ್ಥ ಪ್ರದೇಶ ಗಬ್ಬೆದ್ದಿದೆ. ಎಲ್ಲೆಂದರಲ್ಲಿ ಅಶುಚಿತ್ವ ಕಾಣುತ್ತಿದ್ದು, ಅಲ್ಲಿನ ಬಸ್ ನಿಲ್ದಾಣ ಕುಡುಕರಿಗೆ ಆಶ್ರಯ ನೀಡುತ್ತಿದೆ. ಹೀಗಾಗಿ ಆ ಪ್ರದೇಶಕ್ಕೆ ಹೋಗುವವರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಮತೀರ್ಥ ಹಾಗೂ ಸುತ್ತಲಿನ ಪ್ರದೇಶಕ್ಕೆ ನಿತ್ಯ ನೂರಾರು ಜನ ಭೇಟಿ ನೀಡುತ್ತಾರೆ. ಹೀಗೆ ಬರುವವರು ಸ್ವಚ್ಚತೆಗೆ ಆದ್ಯತೆ ಕೊಡುತ್ತಿಲ್ಲ. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿದ್ದು, ಸುತ್ತಲಿನ ಪ್ರದೇಶ ಕೊಳಚೆ ಹಾಗೂ ಪ್ಲಾಸ್ಟಿಕ್ ರಾಶಿಯಿಂದ ತುಂಬಿಕೊoಡಿದೆ. ಬಸ್ ನಿಲ್ದಾಣದಲ್ಲಿನ ಗಲೀಜು ನೋಡಿ ಅಲ್ಲಿ ಪ್ರಯಾಣಿಕರು ಪ್ರವೇಶಿಸುತ್ತಿಲ್ಲ. ಮಹಿಳೆ ಹಾಗೂ ಮಕ್ಕಳು ಸಹ ಬಸ್ ನಿಲ್ದಾಣದಿಂದ ದೂರವೇ ಬಸ್ಸಿಗಾಗಿ ಕಾಯುವುದು ಅನಿವಾರ್ಯವಾಗಿದೆ.
ಸೆಪ್ಟೆಂಬರ್ 10ರಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಈ ಪ್ರದೇಶಕ್ಕೆ ಭೇಟಿ ನೀಡಿದರು. ಶ್ರಮದಾನದ ಮೂಲಕ ಅಲ್ಲಿನ ಪರಿಸರವನ್ನು ಸ್ವಚ್ಚ ಮಾಡುವ ಪ್ರಯತ್ನ ಮಾಡಿದರು. ಅದಾದ ನಂತರ ಅಲ್ಲಿ ಬಿದ್ದಿದ್ದ ಬಿಯರ್ ಬಾಟಲಿಗಳನ್ನು ಆರಿಸಿದರು. ವಿವಿಧ ಮಾಧ್ಯಮದಲ್ಲಿ ಅಶುಚಿತ್ವದ ವರದಿ ಪ್ರಸಾರವಾಗಿದ್ದರೂ ಸ್ಥಳೀಯ ಆಡಳಿತ ಸ್ವಚ್ಚತೆಗೆ ಕ್ರಮ ಜರುಗಿಸದ ಬಗ್ಗೆ ಬೇಸರವ್ಯಕ್ತಪಡಿಸಿದರು. ಕೇಂದ್ರದ ಅಧ್ಯಕ್ಷ ಆಗ್ನೆಲ್ ರೋಡ್ರಿಗಸ್ ಹಾಗೂ ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಸೇರಿ ಈ ಬಗ್ಗೆ ಪ ಪಂ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
`ಈ ಭಾಗದಲ್ಲಿ ಬೀಟ್ ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು’ ಎಂದು ಪೊಲೀಸರಿಗೆ ಸಹ ಪತ್ರ ನೀಡಿದರು. ಜೊತೆಗೆ ಅಗತ್ಯವಿರುವ ಕಡೆ ಸಿಸಿ ಕ್ಯಾಮರಾ ಅಳವಡಿಸುವಂತೆ ಮನವಿ ಮಾಡಿದರು.
