ಮನೆ ಹಾಳು ಮಾಡುವ ಮಟ್ಕಾ ವಿರುದ್ಧ ಶಿರಸಿ ಪೊಲೀಸರು ಸಮರ ಸಾರಿದ್ದು, ಚಾಲಕರೊಬ್ಬರಿಗೆ ಕಮಿಶನ್ ಆಸೆ ತೋರಿಸಿ ಮಟ್ಕಾ ಆಡಿಸುತ್ತಿದ್ದ ಬುಕ್ಕಿಯನ್ನು ಪತ್ತೆ ಮಾಡಿದ್ದಾರೆ.
ಹುಣಸೆಕೊಪ್ಪ ಗ್ರಾಮದ ಕುಂಟೆಮನೆ ರಾಮದೇವರಮನೆ ಗ್ರಾಮದಲ್ಲಿ ಮಟ್ಕಾ ಆಟ ನಡೆಯುತ್ತಿರುವ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ಸಿಕ್ಕಿತು. ಪೊಲೀಸ್ ಉಪನಿರೀಕ್ಷಕ ಸಂತೋಷಕುಮಾರ ಎಂ ಅವರು ಅಲ್ಲಿ ಹೋದಾಗ ಗಾಂಧೀನಗರದ ಅಂಬಾಗಿರಿಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ರವಿ ಜಗದೀಶ ಗಾಣಿಗ ಎದುರಾದರು. ವಿಚಾರಣೆ ನಡೆಸಿದಾಗ ರವಿ ಗಾಣಿಗ ಅವರೇ ಮಟ್ಕಾ ಆಡಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತು.
1ರೂಪಾಯಿಗೆ 80ರೂ ಕೊಡುವುದಾಗಿ ನಂಬಿಸಿ ರವಿ ಗಾಣಿಗ ಅವರು ಜನರಿಂದ 750ರೂ ಸಂಗ್ರಹಿಸಿದ್ದರು. ಪೊಲೀಸರು ತೀವೃ ವಿಚಾರಣೆ ನಡೆಸಿದಾಗ ಗಿಡಮಾವಿನಕಟ್ಟಾದ ವಿಜಯ ನಾರಾಯಣ ದೇವಾಡಿಗ ಅವರ ಸೂಚನೆ ಮೇರೆಗೆ ಈ ಕೆಲಸ ಮಾಡುತ್ತಿರುವುದಾಗಿ ರವಿ ಗಾಣಿಗ ಒಪ್ಪಿಕೊಂಡರು. ಜನರಿಂದ ಹಣ ಸಂಗ್ರಹಿಸಿ ಮಟ್ಕಾ ಆಡಿಸಿದಕ್ಕಾಗಿ ತಮಗೆ ಕಮಿಶನ್ ದೊರೆಯುವುದಾಗಿಯೂ ತಿಳಿಸಿದರು. ಮಟ್ಕಾ ಬುಕ್ಕಿಯ ಹಿನ್ನಲೆ ಅರಿತ ಪೊಲೀಸರು ಚಾಲಕ ರವಿ ಜಗದೀಶ ಗಾಣಿಗ ಜೊತೆ ವಿಜಯ ನಾರಾಯಣ ದೇವಾಡಿಗ ಅವರ ವಿರುದ್ಧವೂ ಪ್ರಕರಣ ದಾಖಲಿಸಿದರು.
