ಅಡಿಕೆಗೆ ಬಾದಿಸುತ್ತಿರುವ ಎಲೆಚುಕ್ಕಿ ರೋಗ, ಶರಾವತಿ ಪಂಪ್ ಸ್ಟೋರೆಜ್ ಯೋಜನೆ, ಹೊಂಡಗಳಿoದ ಕೂಡಿದ ರಸ್ತೆ, ಬಿಎಸ್ ಎನ್ ಎಲ್ ನೆಟ್ ವರ್ಕ ಸಮಸ್ಯೆ ಹಾಗೂ ಸೂರ್ಯ ಘರ್ ಯೋಜನೆಯ ವಿಷಯವಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಶುಕ್ರವಾರ ಕಾರವಾರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಅವರು ವಿವಿಧ ವಿಷಯಗಳ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. `ಜಿಲ್ಲೆಯ ಎಲ್ಲಾ ಕಡೆ ರಸ್ತೆಗಳ ದುರವಸ್ಥೆಯಿಂದ ಕೂಡಿದೆ. ತಕ್ಷಣ ಹೊಂಡಮಯ ರಸ್ತೆಗಳನ್ನು ಸರಿಪಡಿಸಬೇಕು. ಸಂಚಾರ ನಿಷೇಧ ಕ್ರಮಗಳಿಂದ ಅಪಘಾತಗಳು ಕಡಿಮೆಯಾಗುವ ಬದಲು ಹೆಚ್ಚಳವಾಗುತ್ತಿgದೆ. ಅಪಘಾತ ತಡೆಗೆ ಕ್ರಮ ಜರುಗಿಸಬೇಕು’ ಎಂದು ತಾಕೀತು ಮಾಡಿದರು. `ಮೀನುಗಾರಿಕೆಯ ಇಲಾಖೆ ಮೂಲಕ ಮೀನುಗಾರರಿಗೆ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡುವುದರ ಮೂಲಕ ಮೀನುಗಾರರಿಗೆ ಅನುಕೂಲ ಮಾಡಿಕೊಡಬೇಕು. ಕೇಂದ್ರ ಸರ್ಕಾರದಿಂದ ಜಿಲ್ಲೆಯ 8 ಬಂದರುಗಳನ್ನು ಮೇಲ್ದರ್ಜೆಗೇರಿಸಲು 50 ಕೋಟಿ ರೂ ಗಳ ಯೋಜನೆ ಇದ್ದು, ಕೂಡಲೇ ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಲ್ಲಿ ಕೇಂದ್ರದಲ್ಲಿ ಶೀಘ್ರದಲ್ಲಿ ಅನುಮತಿ ನೀಡಲಾಗುತ್ತದೆ’ ಎಂದು ಹೇಳಿದರು.
`ಶರಾವತಿ ಪಂಪ್ ಸ್ಟೋರೇಜ್ ಸೇರಿದಂತೆ ಯಾವುದೇ ಯೋಜನೆಯನ್ನು ಆರಂಭಿಸುವ ಮೊದಲು ಜಿಲ್ಲೆಯ ಧಾರಣಾ ಶಕ್ತಿ ಅಧ್ಯಯನ ಮಾಡಬೇಕು. ಧಾರಣಾ ಶಕ್ತಿ ಅಧ್ಯಯನ ಇಲ್ಲದೇ ಹೊಸ ಯೋಜನೆ ಒಪ್ಪಿಕೊಳ್ಳಲು ಅಸಾಧ್ಯ’ ಎಂದು ತಿಳಿಸಿದರು. `ಜನತೆ ಹಲವು ಯೋಜನೆಗಳಿಗೆ ತ್ಯಾಗ ಮಾಡಿದರೂ ಕೂಡಾ ಉದ್ಯೋಗ, ಪರಿಹಾರ ಸೇರಿದಂತೆ ಯಾವುದೇ ನಿರೀಕ್ಷಿತ ಪ್ರಯೋಜನವಾಗಿಲ್ಲ. ಬದಲಾಗಿ ಜಿಲ್ಲೆಯ ಪರಿಸರ ಹಾನಿಯಾಗುತ್ತಿದೆ. ಕಾರವಾರ ರೈಲ್ವೆ ನಿಲ್ದಾಣದಲ್ಲಿ ವಾಟರ್ ಸ್ಟೇಷನ್ ಮಾಡುವ ಕುರಿತು ಚರ್ಚಿಸಲಾಗಿದ್ದು, ಇದರಿಂದ ಕಾರವಾರ ನಿಲ್ದಾಣ ಉತ್ತಮವಾದ ರೀತಿಯಲ್ಲಿ ಅಭಿವೃದ್ಧಿಯಾಗುವ ಜೊತೆಗೆ ಜಿಲ್ಲೆಯಲ್ಲಿ ರೈಲ್ವೆಯ ಹಲವು ಯೋಜನೆಗಳು ಇನ್ನಷ್ಟು ಪ್ರಗತಿಯಾಗಲಿವೆ’ ಎಂದರು.
`ಎಲೆ ಚುಕ್ಕಿ ರೋಗ ತಡೆಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ವಿಶೇಷ ಬೆಳೆಗಳು ಮತ್ತು ಬೆಳೆಗಾರರು ಬಗ್ಗೆ ಮಾಹಿತಿ ಅಧಿಕಾರಿಗಳಿಗೆ ಇರಬೇಖು. ಸಾವಯವ ಕೃಷಿಗೆ ಉತ್ತೇಜನ ನೀಡಬೇಕು. ಸರ್ಕಾರಿ ಕಾರ್ಯಕ್ರಮಗಳಲ್ಲಿ ಇಲ್ಲಿನ ಸ್ಥಳಿಯ ಮತ್ತು ಸ್ವದೇಶೀ ಉತ್ಪನ್ನಗಳ ಬಳಕೆ ಹೆಚ್ಚಿಸಬೇಕು’ ಎಂದು ಸೂಚಿಸಿದರು. `ಕೃಷಿ, ತೋಟಗಾರಿಕೆ ಮತ್ತು ಪಶುಪಾಲನಾ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು’ ಎಂದು ಸೂಚಿಸಿದರು. `ಹೆಸ್ಕಾಂ ವತಿಯಿಂದ ಸೂರ್ಯ ಘರ್ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಹೆಚ್ಚು ಅರಿವು ಮತ್ತು ಜಾಗೃತಿ ಮೂಡಿಸಬೇಕು. ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೂ ಇದನ್ನು ಅಳವಡಿಸಬೇಕು. ಈ ಯೋಜನೆಯು ಆದಾಯ ಮೂಲ ಎಂಬುದನ್ನು ಮನವರಿಕೆ ಮಾಡಿಕೊಡಬೇಕು’ ಎಂದರು. `ಜಿಲ್ಲೆಯಲ್ಲಿ ಗೃಹ ಜ್ಯೋತಿ ಯೋಜನೆಯಿಂದ ಅನರ್ಹರಾಗಿರುವ ಸುಮಾರು 10000 ಮಂದಿಯನ್ನು ಈ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಕ್ರಮ ಕೈಗೊಳ್ಳಿ’ ಎಂದರು.
`ಜಿಲ್ಲೆಯಲ್ಲಿನ ಪ್ರತಿಯೊಬ್ಬ ಸಾರ್ವಜನಿಕರಿಗೂ ಆರೋಗ್ಯ ಇಲಾಖೆಯ ಮೂಲಕ ಆಯಷ್ಮಾನ್ ಆರೋಗ್ಯ ಸೇವೆಗಳು ಮತ್ತು ಹಿರಿಯ ನಾಗರೀಕರಿಗೆ ವಯೋ ವಂದನಾ ಯೋಜನೆಯ ಪ್ರಯೋಜನವನ್ನು ತಲುಪಿಸಿ’ ಎಂದು ಸೂಚಿಸಿದರು. `ಎಲ್ಲಾ ಸಾರ್ವಜನಿಕರಿಗೂ ಆಯಷ್ಮಾನ್ ಆರೋಗ್ಯ ಸೇವೆಗಳು ಮತ್ತು ಹಿರಿಯ ನಾಗರೀಕರಿಗೆ ವಯೋ ವಂದನಾ ಯೋಜನೆಯ ಪ್ರಯೋಜನಗಳು ದೊರೆಯಬೇಕು. ಇದನ್ನು ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗದ ಬಗ್ಗೆ ತಾಂತ್ರಿಕ ಕಾರಣಗಳು ನೆಪವಾಗಬಾರದು’ ಎಂದರು. ಜಿಲ್ಲೆಯಲ್ಲಿ ಬಿ.ಎಸ್.ಎನ್.ಎಲ್ ಟವರ್‌ಗಳ ನಿರ್ಮಾಣ ಮತ್ತು ಸಂಪರ್ಕ ಕಾರ್ಯದ ಕುರಿತಂತೆ ಅರಣ್ಯ ಇಲಾಖೆಯ ಮೂಲಕ ಬಿ.ಎಸ್.ಎನ್.ಎಲ್ ಗೆ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡುವಂತೆ ತಿಳಿಸಿದ ಅವರು ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಿ ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸಬೇಕು ಎಂದರು. `ಜಲ ಜೀವನ್ ಮಿಷನ್ ಕಾಮಗಾರಿಗಳಲ್ಲಿ ವಿಳಂಬ ಮತ್ತು ಕಳಪೆ ಗುಣಮಟ್ಟದ ಕುರಿತು ದೂರುಗಳು ಬರುತ್ತಿದ್ದು, ಈ ಬಗ್ಗೆ ಪರಿಶೀಲಿಸಿ. ಗುತ್ತಿಗೆದಾರರಿಗೆ ಕಾಮಗಾರಿ ಮುಕ್ತಾಯ ಸಮಯ ನಿಗಧಿಗೊಳಿಸಿ ಅವರ ವಿರುದ್ದ ಬಿಗು ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಮುಂದಿನ ಹಂತದಲ್ಲಿ ಇನ್ನೂ 800 ಹಳ್ಳಿಗಳಿಗೆ ಜಲ ಜೀವನ್ ಯೋಜನೆಯ ಸಂಪರ್ಕ ನೀಡಲು ಬಾಕಿಯಿದ್ದು ಇದನ್ನೂ ಶೀಘ್ರದಲ್ಲಿ ಮುಕ್ತಾಯಗೊಳಿಸಿ’ ಎಂದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷಮಾ ಗೋಡಬೋಲೆ, ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಇದ್ದರು.
Discussion about this post