ಮಾದಕ ವ್ಯಸನದ ವಿರುದ್ಧ ನಿರಂತರ ಹೋರಾಟ ನಡೆದರೂ ಶಿರಸಿಯ ಪಡ್ಡೆ ಹುಡುಗರು ಬದಲಾಗಿಲ್ಲ. 24 ವರ್ಷದೊಳಗಿನ ಮೂವರು ಗಾಂಜಾ ಅಮಲಿನಲ್ಲಿ ಸಿಕ್ಕಿಬಿದ್ದಿದ್ದು, ಪೊಲೀಸರು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಸೆ 12ರಂದು ರಾತ್ರಿ ಹುತಗಾರ್ ಗ್ರಾ ಪಂ ಮೈದಾನದ ಬಳಿ ಮೂವರು ಅಲೆದಾಡುತ್ತಿದ್ದರು. ಅವರು ಸಾರ್ವಜನಿಕರ ಜೊತೆ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಹೀಗಾಗಿ ಶಿರಸಿ ಗ್ರಾಮೀಣ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಂತೋಷಕುಮಾರ್ ಅವರು ತಮ್ಮ ಸಿಬ್ಬಂದಿ ಜೊತೆ ಅಲ್ಲಿ ಹೋದರು.
ಆಗ ಅಲ್ಲಿ ನೆಹರು ನಗರ ಪಟೇಲ್ ಸಾಮಿಲ್ ಬಳಿ ಕಟ್ಟಡ ಕಾರ್ಮಿಕರಾಗಿರುವ ದೀಪಕ ಪರಮೇಶ್ವರ ಕೆರಳಕರ್ (24) ನಶೆಯಲ್ಲಿದ್ದರು. ಆರ್ ಎನ್ ಎಸ್ ಶೋರೂಮಿನ ಬಳಿಯ ಮೆಕಾನಿಕ್ ಪರೀಕ್ಷಿತ್ ಶ್ರೀನಿವಾಸ ಪತ್ತಾರ್ (24) ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಹುಬ್ಬಳ್ಳಿ ರಸ್ತೆಯ ನೆಹರು ನಗರದ ರೇಶನ್ ಅಕ್ಕಿ ಗೌಡಾನ್ ಹಿಂಭಾಗದ ನಿವಾಸಿ ಶಿವಮೂರ್ತಿ ಈಶ್ವರ ನಾಯ್ಕ (22) ಸಹ ನಶೆಯ ಗುಂಗಿನಲ್ಲಿ ತೇಲಾಡುತ್ತಿದ್ದರು.
ಈ ಮೂವರು ಹುಡುಗರು ಉತ್ತಮ ಕುಟುಂಬದಿoದ ಬಂದವರಾಗಿದ್ದು, ಸಹವಾಸ ದೋಷದಿಂದ ದಾರಿತಪ್ಪಿದ್ದರು. ಹೀಗಾಗಿ ಪೊಲೀಸರು ಅವರನ್ನು ಮಾತನಾಡಿಸಿದಾಗ ಸರಿಯಾದ ಉತ್ತರ ಬರಲಿಲ್ಲ. ಹೀಗಾಗಿ ಆ ಮೂವರನ್ನು ವಶಕ್ಕೆಪಡೆದು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು. ವೈದ್ಯರು ಆ ಮೂವರು ಗಾಂಜಾ ಸೇವಿಸಿದನ್ನು ದೃಢಪಡಿಸಿದ್ದು, ನಿಷೇಧಿತ ಮಾದಕ ವ್ಯಸನಕ್ಕೆ ಬಲಿಯಾದ ಮೂವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದರು.
