ಆಡಳಿತಾತ್ಮಕ ದೃಷ್ಠಿಯಿಂದ ಉತ್ತರ ಕನ್ನಡ ಜಿಲ್ಲೆಯನ್ನು ಎರಡು ಜಿಲ್ಲೆಯನ್ನಾಗಿಸಬೇಕು ಎಂಬ ಹೋರಾಟ ನಡೆಯುತ್ತಿದೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಹಾಗೂ ಬನವಾಸಿಯನ್ನು ಸಾಗರಕ್ಕೆ ಸೇರಿಸಿ ಮತ್ತೊಂದು ಜಿಲ್ಲೆ ಮಾಡುವ ಹೋರಾಟ ಸದ್ದು ಮಾಡುತ್ತಿದೆ.
ಈ ಎಲ್ಲದರ ನಡುವೆ ಯಲ್ಲಾಪುರವನ್ನು ಜಿಲ್ಲಾಕೇಂದ್ರವನ್ನಾಗಿಸಬೇಕು ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಅವರು ಆಗ್ರಹಿಸಿದ್ದು, ಸೆಪ್ಟೆಂಬರ್ 15ರಂದು ಯಲ್ಲಾಪುರದ ಪ್ರವಾಸಿ ಮಂದಿರದಲ್ಲಿ ಅವರು ಸಮಾನ ಮನಸ್ಕರ ಸಭೆ ಕರೆದಿದ್ದಾರೆ. ಬೆಳಗ್ಗೆ 10.30ಕ್ಕೆ ಸಭೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯನ್ನು ಒಡೆದು ಆಳುವುದಕ್ಕಾಗಿ ಅನೇಕರು ವಿರೋಧವ್ಯಕ್ತಪಡಿಸಿದ್ದಾರೆ. ಅನೇಕರು ಜಿಲ್ಲಾ ವಿಭಜನೆಯನ್ನು ಸ್ವಾಗತಿಸುತ್ತಿದ್ದಾರೆ. ಈ ನಡುವೆ ಸಾಗರ ಜಿಲ್ಲೆ ಮಾಡುವುದಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಹಾಗೂ ಬನವಾಸಿ ತಾಲೂಕು ಪ್ರತ್ಯೇಕಿಸುವ ಹೋರಾಟಕ್ಕೆ ಉತ್ತರ ಕನ್ನಡಿಗರಿಂದ ವಿರೋಧವ್ಯಕ್ತವಾಗಿದೆ.
`2026ರಲ್ಲಿ ರಾಷ್ಟ್ರೀಯ ಜನಗಣತಿ ಆರಂಭವಾಗಲಿದ್ದು, ನೂತನ ಜಿಲ್ಲೆಗಳ ಪ್ರಸ್ತಾವನೆಗಳನ್ನು ಈ ವರ್ಷದ ಡಿಸೆಂಬರ್ ಅಂತ್ಯಗೊಳಗೆ ಪ್ರಕ್ರಿಯೆ ಮುಗಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಹಿನ್ನಲೆ 2025ರ ಅಂತ್ಯದೊಳಗೆ ಉತ್ತರ ಕನ್ನಡ ಜಿಲ್ಲೆಯೂ ವಿಭಜನೆಯಾಗುವ ಸಾಧ್ಯತೆ ಹೆಚ್ಚಿದೆ. ವಿಭಜನೆ ಆದರೆ ಯಲ್ಲಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿಸಬೇಕು’ ಎಂದು ರಾಮು ನಾಯ್ಕ ಅವರು ಆಗ್ರಹಿಸಿದ್ದಾರೆ.
`ಸಾಗರ ಜಿಲ್ಲೆ ರಚನೆ ಮಾಡುವ ಹೊಸ ಪ್ರಯತ್ನಕ್ಕೆ ಸಿದ್ದಾಪುರ ಹಾಗೂ ಬನವಾಸಿಯನ್ನು ಉತ್ತರ ಕನ್ನಡದಿಂದ ಪ್ರತ್ಯೇಕಿಸುವುದು ಸರಿಯಲ್ಲ. ಇದರಿಂದ ಜಿಲ್ಲೆಯ ಅಸ್ತಿತ್ವಕ್ಕೆ ಧಕ್ಕೆ ಆಗಲಿದೆ’ ಎಂದವರು ಹೇಳಿದ್ದಾರೆ. ಈ `ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ಸಮಾನ ಮನಸ್ಕರು ಸಭೆಗೆ ಬರೆಬೇಕು’ ಎಂದು ಕೋರಿದ್ದಾರೆ.
Discussion about this post