ಕುಮಟಾದ ಹೊಲನಗದ್ದೆ ಬಳಿ ಮಾಡಿದ ಡಾಂಬರ್ ರಸ್ತೆ ಎರಡು ವರ್ಷವೂ ಬಾಳಿಕೆಗೆ ಬಂದಿಲ್ಲ. ಈ ವರ್ಷ ಸುರಿದ ಮಳೆಗೆ ಇಡೀ ರಸ್ತೆ ಕಿತ್ತು ಹೋಗಿದ್ದು, ಜನರ ಪ್ರಾಣಕ್ಕೆ ಕುತ್ತು ತಂದಿದೆ.
ಕುಮಟಾದಿoದ ಮಂಗೊoಡ್ಲ ಮಾರ್ಗವಾಗಿ ಹೊನ್ನಳ್ಳಿ, ಶಶಿಹಿತ್ಲ ಭಾಗದ ರಸ್ತೆಗೆ ಎರಡು ವರ್ಷದ ಹಿಂದೆ ಡಾಂಬರ್ ಸುರಿಯಲಾಗಿತ್ತು. ಆದರೆ, ತೆಳ್ಳಗೆ ಡಾಂಬರ್ ಸುರಿದ ಪರಿಣಾಮ ಡಾಂಬರ್ ಮಾಯವಾಗಿದ್ದು ಅದರ ಅಡಿಗಿನ ಚಲ್ಲಿ ಕಲ್ಲುಗಳು ಮಾತ್ರ ಉಳಿದಿವೆ. ರಸ್ತೆ ನಿರ್ವಹಣೆ ನೋಡಿಕೊಳ್ಳಬೇಕಾದ ಗುತ್ತಿಗೆದಾರರು ಸಹ ನಾಪತ್ತೆಯಾಗಿದ್ದಾರೆ.
ಸಾಮಾನ್ಯವಾಗಿ ಲೋಕೋಪಯೋಗಿ ಇಲಾಖೆ ರಸ್ತೆ ನಿರ್ಮಿಸುವಾಗ ಹಲವು ಷರತ್ತು ವಿಧಿಸುತ್ತದೆ. ರಸ್ತೆ ಡಾಂಬರೀಕರಣದ ಜೊತೆ 5 ವರ್ಷಗಳ ನಿರ್ವಹಣೆ ಹಾಗೂ 6ನೇ ವರ್ಷ ಮರು ಡಾಂಬರೀಕರಣ ಜವಾಬ್ದಾರಿ ಗುತ್ತಿಗೆದಾರರ ಮೇಲಿರುತ್ತದೆ. ಆದರೆ, ಇಲ್ಲಿ ಎರಡೇ ವರ್ಷಕ್ಕೆ ರಸ್ತೆ ಹಾಳಾಗಿದ್ದರೂ ಅದನ್ನು ಕೇಳುವವರಿಲ್ಲ.
ರಸ್ತೆ ಹಾಳಾದ ಕಾರಣ ರಿಕ್ಷಾದವರು ಸಹ ಈ ಊರಿಗೆ ಬರುತ್ತಿಲ್ಲ. ಬಂದರೂ ದುಬಾರಿ ಬಾಡಿಗೆ ಕೊಡಲು ಬಡ ಜನರಿಗೆ ಆಗುತ್ತಿಲ್ಲ. ಮನೆ ಮನೆಗೆ ವಿತರಣೆಯಾಗಬೇಕಿದ್ದ ಅಡುಗೆ ಸಿಲೆಂಡರ್ ವಾಹನವೂ ಇಲ್ಲಿ ಸಂಚಾರವಿಲ್ಲ. ಹೀಗಾಗಿ ಹಾಳಾದ ರಸ್ತೆಯಲ್ಲಿ ಮಹಿಳೆಯರೇ ಗ್ಯಾಸ್ ಸಿಲೆಂಡರ್ ಹೊತ್ತು ಸಾಗಿಸುತ್ತಿದ್ದಾರೆ. ಸೈಕಲ್-ಬೈಕಿನಲ್ಲಿ ಓಡಾಡುವವರು ಈ ರಸ್ತೆಯಲ್ಲಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ.
ಸೆಪ್ಟೆಂಬರ್ 14ರಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರಕ್ಕೆ ಆ ಊರಿನ ಜನ ಸಮಸ್ಯೆ ಹೇಳಿದ್ದು, ಕೇಂದ್ರದ ಅಧ್ಯಕ್ಷ ಆಗ್ನೆಲ್ ರೋಡ್ರಿಗ್ರಸ್ ಹಾಗೂ ಸುಧಾಕರ ನಾಯ್ಕ ಅವರು ಸ್ಥಳ ಪರಿಶೀಲನೆ ಮಾಡಿದರು. ಕಳಪೆ ಕಾಮಗಾರಿ ಹಾಗೂ ಜನ ಅನುಭವಿಸುವ ಸಮಸ್ಯೆ ಬಗ್ಗೆ ಅವರು ವಿಷಾಧಿಸಿದರು. `ಕಳಪೆ ಕಾಮಗಾರಿ ಮಾಡಿದ್ದರೂ ಗುತ್ತಿಗೆದಾರರಿಗೆ ಹಣ ಪಾವತಿ ನಡೆದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು’ ಎಂದವರು ಆಗ್ರಹಿಸಿದರು.
