ಶರಾವತಿ ನದಿಗೆ ಅಡ್ಡಲಾಗಿ ಸರ್ಕಾರ ನಿರ್ಮಿಸಲು ಹೊರಟಿರುವ ಪಂಪ್ ಸ್ಟೋರೇಜ್ ಯೋಜನೆ ಸಿಂಹದ ಬಾಲ ಹೊಂದಿರುವ ಸಿಂಗಳಿಕ ಕೋತಿಗೆ ಮಾರಕವಾಗಿದೆ. ಯೋಜನೆ ಅನುಷ್ಠಾನಕ್ಕಾಗಿ ಸೂಕ್ಷ್ಮ ಪ್ರದೇಶದಲ್ಲಿ 16041 ಮರಗಳನ್ನು ಕಡಿಯಲಾಗುತ್ತದೆ. ಮರ ಕಡಿತದಿಂದ ಸಿಂಗಳಿಕ ಓಡಾಟಕ್ಕೆ ಸಮಸ್ಯೆ ಆಗದಂತೆ ತಡೆಯಲು ಇಲ್ಲಿ ಬದುಕುಳಿದ ಮರದಿಂದ ಮರಕ್ಕೆ ಹಗ್ಗದ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ದಾರಿ ತಪ್ಪದಂತೆ ಎಚ್ಚರಿಕೆವಹಿಸಲು `ಸಿಂಗಳಿಕ ಸಾಗುವ ದಾರಿ’ ಎಂದು ನಾಮಫಲಕವನ್ನು ಹಾಕುವ ಸಾಧ್ಯತೆಗಳಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಹಾಗೂ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಯೋಜನೆ ಜಾರಿಗೆ ಉದ್ದೇಶಿಸಲಾಗಿದೆ. ಈ ಭಾಗದಲ್ಲಿ ಹರಿಯುವ ಶರಾವತಿ ನದಿ ಪ್ರದೇಶದಲ್ಲಿ ಭೂಗತ ಸುರಂಗ ಕೊರೆದು ಪಂಪ್ ಸ್ಟೋರೇಜ್ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ. ಯೋಜನೆಗೆ 54.15 ಹೆಕ್ಟೇರ್ ಅರಣ್ಯ ಅಗತ್ಯವಿದ್ದು, ಇಲ್ಲಿ ಕಡಿದ ಮರಕ್ಕೆ ಪರ್ಯಾಯವಾಗಿ ಚಿಕ್ಕಮಗಳೂರಿನಲ್ಲಿ ಗಿಡ ನೆಡಲಾಗುತ್ತದೆ. ಗಿಡ ನೆಡಲು ಕೆಪಿಸಿಯವರೇ ಅರಣ್ಯ ಇಲಾಖೆಗೆ ಕಾಸು ಕೊಟ್ಟು ಪ್ರಕರಣ ಮುಗಿಸುವ ಸಿದ್ಧತೆ ನಡೆಸಿದ್ದಾರೆ.
ಕರ್ನಾಟಕ ವಿದ್ಯುತ್ ನಿಗಮದ ನಿಯಮಿತವೇ ಈ ಯೋಜನೆಯ ರೂವಾರಿ. ಅದಕ್ಕಾಗಿ 2017ರಿಂದಲೂ ವಿವಿಧ ಅನುಮತಿಗಳಿಗಾಗಿ ಪತ್ರಬರೆದು, ತಾತ್ಕಾಲಿಕ ಅನುಮತಿಯನ್ನುಪಡೆಯಲಾಗಿದೆ. ಹೊನ್ನಾವರದ ನಗರಬಸ್ತಿಕೇರಿ, ಗೇರುಸೊಪ್ಪ, ಬೆಗೊಡಿ ಗ್ರಾಮಗಳ 24.31 ಹೆಕ್ಟೇರ್ ಖಾಸಗಿ ಜಮೀನು ಈ ಯೋಜನೆಗೆ ಬಲಿ ಆಗಲಿದೆ. ಅಧಿಕೃತ ಮಾಹಿತಿ ಪ್ರಕಾರ ಈ ವ್ಯಾಪ್ತಿಯಲ್ಲಿರುವ ಆರು ಮನೆಗಳು, 1 ದೇವಾಲಯ, ಅಂಗನವಾಡಿಗಳು ಸರ್ಕಾರದ ವಶವಾಗಲಿದೆ.
ಈ ಯೋಜನೆಯಿಂದ ಅಪರೂಪದ ಸಸ್ಯ ಸಂಪತ್ತು, ವನ್ಯಜೀವಿಗಳಿರುವ ಹೊನ್ನಾವರ ಅರಣ್ಯ ವಿಭಾಗ ಅಲ್ಲಲ್ಲಿ ಬರಡಾಗಲಿದೆ. ಕಾರಣ, ಕಡಿತಕ್ಕೆ ಒಳಗಾಗುವ 16041 ಮರಗಳ ಪೈಕಿ 13756 ಮರಗಳು ಹೊನ್ನಾವರ ಅರಣ್ಯ ವಿಭಾಗಕ್ಕೆ ಸೇರಿದ್ದಾಗಿದೆ. ಈ ಪ್ರದೇಶದಲ್ಲಿ ಭೂಮಿಯ ಒಳಗೆ 7ಕಿಮೀ ಸುರಂಗ ತೆರೆಯಲಾಗುತ್ತದೆ. ಶರಾವತಿ ಭೂಗತ ವಿದ್ಯುತ್ ಯೋಜನೆಯ ವಿದ್ಯುದಾಗಾರಗಳ ಸಂಪರ್ಕದ ರಸ್ತೆಯನ್ನು 3.5 ಮೀಟರ್ನಿಂದ 5.5 ಮೀಟರ್ಗೆ ವಿಸ್ತರಿಸಲಾಗುತ್ತದೆ. ಆ ಪ್ರದೇಶದಲ್ಲಿ ವನ್ಯಜೀವಿಗಳು ಬಾರದಂತೆ ತಡೆಯಲು ಸಿಮೆಂಟ್ ದ್ವಾರಗಳನ್ನು ನಿರ್ಮಿಸಲಾಗುತ್ತದೆ.
Discussion about this post