ಕಾರವಾರದ ಸುಂಕೇರಿ ಬಳಿಯ ಸಣ್ಣ ಮಸೀದಿಯ ಅಂಗಡಿ ವಿಷಯವಾಗಿ ಗಲಾಟೆ ನಡೆದಿದೆ. ಈ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಸುಂಕೇರಿ ಸಣ್ಣ ಮಸೀದಿ ಬಳಿಯ ಅಬುಬಕ್ಕರ್ ಶೇಖ್ (74) ಅವರು ಮಸೀದಿಯ ಅಂಗಡಿಯನ್ನು ನಡೆಸುತ್ತಿದ್ದರು. ಕುಷನ್ ಮೇಕರ್ ಆಗಿ ಕೆಲಸ ಮಾಡುವ ಅಬುಬಕ್ಕರ್ ಅವರು ಆ ಅಂಗಡಿ ನಡೆಸಲು ತಮ್ಮನಿಗೆ ನೀಡಿದ್ದರು. ಹೀಗಾಗಿ ಅವರ ತಮ್ಮ ಅಬ್ದುಲ್ಖಾದರ್ ಶೇಖ್ ಅಂಗಡಿ ನಡೆಸುತ್ತಿದ್ದರು.
ಅಬ್ದುಲ್ಖಾದರ್ ಶೇಖ್ ಅವರು ಅಂಗಡಿಯಲ್ಲಿ ದುರ್ವತನೆ ತೋರಿದ್ದರಿಂದ ಕೆಲವರು ಸಿಟ್ಟಾಗಿದ್ದರು. ದುರ್ವರ್ತನೆಯನ್ನು ಅಲ್ಲಿನ ರೆಹಮಾತುಲ್ಲಾ ಖಾನ್, ಇಕ್ಬಾಲ್ ಶೇಖ್, ಖುದ್ದುಸ್ ಶೇಖ್ ಹಾಗೂ ರಶೀದ್ ಸಹಿಸಲಿಲ್ಲ. ಅಂಗಡಿ ಖಾಲಿ ಮಾಡುವಂತೆ ಅವರು ಸೂಚಿಸಿದ್ದು, ಇದಕ್ಕೆ ಅಬುಬಕ್ಕರ್ ಶೇಖ್ ಅವರು ಒಪ್ಪಿರಲಿಲ್ಲ.
ವರ್ಷದ ಹಿಂದೆಯೇ ಈ ಬಗ್ಗೆ ಗಲಾಟೆ ನಡೆದಿದ್ದು, ಆಗ ಆ ನಾಲ್ವರು ಅಂಗಡಿಯ ಬೀಗ ಮುರಿದಿದ್ದರು. ಅಂಗಡಿಯಲ್ಲಿದ್ದ ಸಾಮಾನುಗಳನ್ನು ಹೊತ್ತೊಯ್ದು ಅಬ್ದುಲ್ಖಾದರ್ ಶೇಖ್ ಅವರ ಮನೆಯಲ್ಲಿರಿಸಿದ್ದರು. ಇದರಿಂದ ನಷ್ಟವಾದ ಬಗ್ಗೆ ಅಬುಬಕ್ಕರ್ ಶೇಖ್ ಅವರು ಪೊಲೀಸ್ ದೂರು ನೀಡಿದ್ದು, ಪೊಲೀಸರು ಸಮಾದಾನ ಮಾಡಿ ಕಳುಹಿಸಿದ್ದರು.
ಆದರೆ, ಇದರಿಂದ ಸಮಾದಾನವಾಗದ ಅಬುಬಕ್ಕರ್ ಶೇಖ್ ಅವರು ನ್ಯಾಯಾಲಯದ ಮೆಟ್ಟಿಲೇರಿದರು. ಸಣ್ಣ ಮಸೀದಿ ಬಳಿಯ ರೆಹಮಾತುಲ್ಲಾ ಖಾನ್, ಇಕ್ಬಾಲ್ ಶೇಖ್, ಖುದ್ದುಸ್ ಶೇಖ್ ಹಾಗೂ ರಶೀದ್ ಅವರಿಂದ ತಮಗೆ ನಷ್ಟವಾಗಿದೆ ಎಂದು ದೂರಿದರು. ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.
