`ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳ ಜೊತೆ ಹಾಸ್ಟೇಲ್’ಗಳಲ್ಲಿ ಸಹ ಮಕ್ಕಳ ರಕ್ಷಣಾ ನೀತಿ ಅನುಷ್ಠಾನಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ತಾಕೀತು ಮಾಡಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಅವರು `ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿಯ ಬಗ್ಗೆ ಎಲ್ಲಾ ವಿದ್ಯಾ ಸಂಸ್ಥೆಯವರು ಅರಿಯಬೇಕು. ಅಲ್ಲಿರುವ 20 ಅಂಶಗಳ ತತ್ವವನ್ನು ತಪ್ಪದೇ ಪಾಲಿಸಬೇಕು’ ಎಂದು ಸೂಚಿಸಿದರು. ಎಲ್ಲಾ ವಿದ್ಯಾ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು , ಕ್ರೀಡಾ ವಸತಿ ನಿಲಯಗಳು ಮತ್ತು ಸರಕಾರಿ ಕಚೇರಿಗಳಲ್ಲಿ ಈ 20 ಅಂಶಗಳ ತತ್ವಗಳ ಪಾಲನೆ ಆಗಬೇಕು’ ಎಂದರು. `ಪ್ರತಿ ಅಧಿಕಾರಿಯೂ ತಮ್ಮ ವ್ಯಾಪ್ತಿಯಲ್ಲಿರುವ ಮಕ್ಕಳ ಸುರಕ್ಷತೆ ಕುರಿತಂತೆ ನಿಗಧಿತವಾಗಿ ಸಭೆಗಳನ್ನು ನಡಿಸಿ ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.
ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿನ ಯೋಜನೆಗಳು ಮತ್ತು ಕಾರ್ಯಕ್ರಮಗಳಡಿಯಲ್ಲಿ ಮಕ್ಕಳಿಗೆ ನಿಗಧಿಪಡಿಸಿರುವ ಅನುದಾನದ ಬಳಕೆ ಮತ್ತು ಸುರಕ್ಷತೆಗೆ ಅಳವಡಿಸಿಕೊಂಡಿರುವ ಕ್ರಮಗಳ ಬಗ್ಗೆ ಅಂಕಿ ಆಂಶಗಳ ಸಹಿತ ವರದಿಯನ್ನು ನೀಡುವಂತೆ ಸೂಚಿಸಿದರು. `ಶಾಲಾ ಆವರಣದಲ್ಲಿ ಸಿಸಿಟಿವಿಗಳ ಅಳವಡಿಕೆ, ಮಕ್ಕಳ ದೂರು ಪೆಟ್ಟಿಗೆ ಅಳವಡಿಕೆ, ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜನೆ ಮಾಡಬೇಕು, ಮಕ್ಕಳ ಉಚಿತ ಸಹಾಯವಾಣಿ 1098ನ್ನು ಶಾಶ್ವತವಾಗಿ ಬರೆಸಬೇಕು. ವಿವಿಧ ಇಲಾಖೆಗಳಿಂದ ಮಕ್ಕಳಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಶೇ 100ರಷ್ಟು ಸಮರ್ಪಕವಾಗಿ ವಿತರಣೆ ಮಾಡಬೇಕು’ ಎಂದು ಸೂಚಿಸಿದರು.
`ಗ್ರಾಮಸಭೆಗಳು, ಶಾಲಾ ಸಲಹಾ ಪೆಟ್ಟಿಗೆಯಲ್ಲಿ ಸಲ್ಲಿಕೆಯಾಗುವ ಮಕ್ಕಳ ದೂರುಗಳನ್ನು ಕಡ್ಡಾಯವಾಗಿ ಗಂಭೀರವಾಗಿ ಪರಿಗಣಿಸಬೇಕು. ಆ ಸಮಸ್ಯೆಗಳನ್ನು ನಿವಾರಣೆ ಮಾಡುವಲ್ಲಿ ಇಲಾಖೆಗಳು ಅತ್ಯಂತ ಪರಿಣಾಮಕಾರಿಯಗಿ ಕಾರ್ಯನಿರ್ವಹಿಸಬೇಕು. ಆ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು’ ಎಂದರು. `ಜಿಲ್ಲೆಯಲ್ಲಿ ಸಂಪೂರ್ಣ ಮಕ್ಕಳ ಸ್ನೇಹಿ ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವಲ್ಲಿ ಎಲ್ಲಾ ಇಲಾಖೆಗಳು ಮಕ್ಕಳ ರಕ್ಷಣಾ ಆಯೋಗದ ಸೂಚಿಸಿರುವ ಎಲ್ಲಾ ಅಂಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು. ಈ ಸಭೆಯಲ್ಲಿ ತರಬೇತಿನಿರತ ಐಎಎಸ್ ಜಿಲ್ಲಾಧಿಕಾರಿ ಝೂಫಿಶಾನ್ ಹಕ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅಲ್ಲಾಭಕ್ಷ್, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ್, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ನಟರಾಜ್ , ಡಿವೈಎಸ್ಪಿ ಗಿರೀಶ್ ಇದ್ದರು.
Discussion about this post