ಕಾರವಾರದ ಅಮೃತ ಓರಾ ಹೊಟೇಲ್ ಮಾಳಿಗೆಯಿಂದ ಬಿದ್ದ ವಿದೇಶಿ ವ್ಯಕ್ತಿಯೊಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕದಂಬ ನೌಕಾನೆಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಕ್ಕಾಗಿ ರಷ್ಯಾದ ಇವಾನ್ ಡೆನೆವಾ (40) ಅವರು ಭಾರತಕ್ಕೆ ಬಂದಿದ್ದರು. ಸೋಮವಾರ ಅವರು ನಗರದ ಅಮೃತ್ ಓರಾ ಹೊಟೇಲಿಗೆ ಹೋಗಿದ್ದರು. ಹೊಟೇಲ್ ಬಾಲ್ಕನಿಯಲ್ಲಿ ಸಿಗರೇಟು ಸೇದುತ್ತಿದ್ದ ಅವರು ಅಲ್ಲಿಂದ ಜಾರಿ ಕೆಳಗೆ ಬಿದ್ದರು.
ಬಿದ್ದ ರಭಸಕ್ಕೆ ಅವರು ಗಂಭೀರ ಪ್ರಮಾಣದಲ್ಲಿ ಪೆಟ್ಟು ಮಾಡಿಕೊಂಡಿದ್ದು, ಕಿರುಚಾಟ ನೋಡಿದ ಜನ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಅದಾದ ನಂತರ ಇವಾನ್ ಡೆನೆವಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಗೋವಾದ ಆಸ್ಪತ್ರೆಗೆ ಸಾಗಿಸಲಾಯಿತು.
ಅಮೃತ ಓರಾ ಹೊಟೇಲಿನಲ್ಲಿ ಸಾಕಷ್ಟು ಸುರಕ್ಷತೆ ಇದ್ದರೂ ವಿದೇಶಿಗ ಬಿದ್ದಿರುವುದು ಹೇಗೆ? ಎನ್ನುವ ಬಗ್ಗೆ ಅಲ್ಲಿನವರು ಚರ್ಚಿಸಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
