ಸರ್ಕಾರದ ವಿದ್ಯುತ್ ಯೋಜನೆಗೆ ಶರಾವತಿ ನದಿ ಬಲಿಯಾಗುವುದನ್ನು ವಿರೋಧಿಸಿ ಹೊನ್ನಾವರದಲ್ಲಿ ದೊಡ್ಡ ಆಂದೋಲನ ನಡೆಯುತ್ತಿದೆ. ಈ ನಡುವೆ ಶರಾವತಿ ನದಿಗೂ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಸೇರುತ್ತಿದೆ.
ಹೊನ್ನಾವರದ ಶರಾವತಿ ನದಿ ಅಂಚಿನಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಬೀಳುತ್ತಿದೆ. ಅನೇಕರು ತಮ್ಮ ಮನೆಯ ತ್ಯಾಜ್ಯವನ್ನು ನದಿ ಅಂಚಿಗೆ ತಂದು ಎಸೆಯುತ್ತಿದ್ದಾರೆ. ಹಳೆ ಶರಾವತಿ ಸೇತುವೆ ಅಂಚಿನ ಪ್ರದೇಶ ಮೀನು-ಮಾಂಸ, ಪ್ಲಾಸ್ಟಿಕ್ ಸೇರಿ ಬಗೆ ಬಗೆಯ ತ್ಯಾಜ್ಯಗಳು ತುಂಬಿವೆ. ವಿವಿಧ ಹೊಟೇಲುಗಳಲ್ಲಿ ಹೆಚ್ಚಾದ ಅನ್ನ-ಸಾರು, ಕೊಳೆತ ಮೊಟ್ಟೆ ಸೇರಿ ಎಲ್ಲಾ ಬಗೆಯ ಹಸಿಕಸಗಳು ಇಲ್ಲಿವೆ. ಪರಿಣಾಮ ಈ ಪ್ರದೇಶ ಗಬ್ಬೆದ್ದಿದೆ. ಬೇರೆ ಬೇರೆ ಊರಿನಿಂದ ಬರುವ ಜನ ಇಲ್ಲಿ ಮೂಗು ಮುಚ್ಚಿಕೊಂಡು ಸಂಚರಿಸುತ್ತಿದ್ದಾರೆ. ಸೇತುವೆಯಿಂದ 50 ಮೀ ಸುತ್ತಲು ಜನ ತ್ಯಾಜ್ಯ ಎಸೆಯುತ್ತಿದ್ದಾರೆ ತ್ಯಾಜ್ಯ ನಿರ್ವಹಣೆ ಸರಿಯಾಗಿರದ ಕಾರಣ ಸ್ಥಳಿಯರು ಬೇಸರವ್ಯಕ್ತಪಡಿಸಿದ್ದಾರೆ.
ಶರಾವತಿ ಒಡಲು ಮಾಲಿನ್ಯವಾಗುತ್ತಿರುವ ಬಗ್ಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಆಗ್ನೇಲ್ ರೋಡ್ರಿಗಸ್ ಮಾಧ್ಯಮದ ಗಮನ ಸೆಳೆದಿದ್ದಾರೆ. ಜನ ಸಂಪರ್ಕ ಇಲ್ಲದ ಹಳೆ ಸೇತುವೆ ಬಳಿ ಭಾರೀ ಪ್ರಮಾಣದ ಕಸ ಸಂಗ್ರಹವಾಗಿರುವ ಬಗ್ಗೆ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ. `ಸ್ವಚ್ಛ ಭಾರತ ಪರಿಕಲ್ಪನೆ ಅಡಿ ಸರ್ಕಾರದಿಂದ ಸಾಕಷ್ಟು ಹಣಕಾಸು ನೆರವು ಬಂದರೂ ಅದು ತಲುಪಬೇಕಾದ ಕಡೆ ತಲುಪುತ್ತಿಲ್ಲ. ಅಧಿಕಾರಿಗಳು ಸಹ ಸ್ವಚ್ಛತೆ ಬಗ್ಗೆ ಕಾಳಜಿವಹಿಸಿಲ್ಲ’ ಎಂದವರು ದೂರಿದ್ದಾರೆ. `ಶರಾವತಿ ಒಡಲು ಸೇರುವ ತ್ಯಾಜ್ಯವನ್ನು ಅಲ್ಲಿಂದ ತೆಗೆಯಬೇಕು. ಸ್ವಚ್ಚತೆ ಎಂಬುದು ಗಾಂಧೀ ಜಯಂತಿಗೆ ಮಾತ್ರ ಸೀಮಿತವಾಗಿರಬಾರದು’ ಎಂದವರು ಆಗ್ರಹಿಸಿದ್ದಾರೆ.
