ಗುಡ್ಡಗಾಡು ಜನರಿಗೆ ಆರೋಗ್ಯ ಸೇವೆ ಒದಗಿಸುವುದಕ್ಕಾಗಿ ಶಿರಸಿಯ ಸ್ಕೋಡ್‌ವೆಸ್ ಸಂಸ್ಥೆ ಬಯೋಕಾನ್ ಪೌಂಡೇಶನ್ ಜೊತೆ ಕೈ ಜೋಡಿಸಿದೆ. ಇದರ ಪರಿಣಾಮವಾಗಿ ಶಿರಸಿಯಲ್ಲಿ ಇಲಾಜ್ ಸ್ಮಾರ್ಟ್ ಕ್ಲಿನಿಕ್ ಸೇವೆ ಶುರುವಾಗಿದೆ.
ಶಿರಸಿಯ ಬಂಡಲ್ ಗ್ರಾಮದಲ್ಲಿ ಮಂಗಳವಾರ `ಇಲಾಜ್ ಸ್ಮಾರ್ಟ್ ಕ್ಲಿನಿಕ್’ ಸೇವೆಗೆ ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿದ್ದಾರೆ. `ದುರ್ಗಮ ಪ್ರದೇಶದ ಜನರ ಆರೋಗ್ಯ ರಕ್ಷಣೆಯಲ್ಲಿ ಇಲಾಜ್ ಸ್ಮಾರ್ಟ್ ಕ್ಲಿನಿಕ್ ಸೇವೆ ಅತ್ಯಂತ ಪರಿಣಾಮಕಾರಿಯಾಗಿದೆ’ ಎಂದವರು ಹೇಳಿದ್ದಾರೆ. `ಪಶ್ಚಿಮ ಘಟ್ಟದ ಕಡಿದಾದ ಗುಡ್ಡ ಬೆಟ್ಟಗಳು ಹಾಗೂ ಅರಣ್ಯ ಪ್ರದೇಶಗಳಲ್ಲಿರುವ ಜನರ ಆರೋಗ್ಯ ಸೇವೆಗೆ ವಿನೂತನ ಮಾದರಿಯಲ್ಲಿ ಇಲಾಜ್ ಸ್ಮಾರ್ಟ್ ಕ್ಲಿನಿಕ್ ಯೋಜನೆ ರೂಪಿಸಲಾಗಿದೆ. ಇತರೆ ಕಡೆಗಳಲ್ಲಿಯೂ ಈ ಸ್ಮಾರ್ಟ ಕ್ಲಿನಿಕ್ ಅಗತ್ಯ’ ಎಂದು ಭೀಮಣ್ಣ ನಾಯ್ಕ ಅವರು ಹೇಳಿದ್ದಾರೆ.
ಬಯೋಕಾನ್ ಫೌಂಡೇಶನ್‌ನ ಮಿಷನ್ ಡೈರೆಕ್ಟರ್ ಡಾ ಅನುಪಮಾ ಶೆಟ್ಟಿ ಅವರು `ಇಲಾಜ್ ಸ್ಮಾರ್ಟ್ ಕ್ಲಿನಿಕ್‌ನ್ನು ಮೊದಲ ಬಾರಿಗೆ ಸ್ಕೊಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಸಹಯೋಗದೊಂದಿಗೆ ಇತರ ಕಡೆಗಳಲ್ಲೂ ಅನುಷ್ಟಾನಗೊಳಿಸಲು ಸಾಧ್ಯವಿದೆ’ ಎಂದು ಹೇಳಿದ್ದಾರೆ. ಬಂಡಲ್ ಗ್ರಾಮ ಪಂಚಾಯತ್‌ನ ಅಧ್ಯಕ್ಷ ದೇವರಾಜ ಮರಾಠಿ ಅವರು `ಈ ಸೇವೆಯಿಂದ ಸುತ್ತಲಿನ 20ಕ್ಕೂ ಅಧಿಕ ಗ್ರಾಮದ ಜನರಿಗೆ ಅನುಕೂಲವಾಗಲಿದೆ’ ಎಂದು ಸಂತಸವ್ಯಕ್ತಪಡಿಸಿದ್ದಾರೆ.
ಬಯೋಕಾನ್ ಫೌಂಡೇಶನ್‌ನ ವ್ಯವಸ್ಥಾಪಕ ಡಾ ವಿಕ್ರಮ್, ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯದರ್ಶಿ ಸರಸ್ವತಿ ಎನ್ ರವಿ, ಬಂಡಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯೋಗಾನಂದ ಪಟಗಾರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ ಗೌಡ, ಇಲಾಜ್ ಸ್ಮಾರ್ಟ್ ಕ್ಲಿನಿಕ್‌ನ ವೈದ್ಯಾಧಿಕಾರಿ ಡಾ ಮೋಹನ್ ಪಾಟೀಲ್, ಯುವ ಧುರೀಣ ಪ್ರವೀಣ ಗೌಡ, ಸಂತೋಷ್ ಗೌಡರ್ ಸೇವೆ ಬಗ್ಗೆ ಮಾತನಾಡಿದರು. ಸ್ಕೊಡ್‌ವೆಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡಾ ವೆಂಕಟೇಶ ನಾಯ್ಕ, ಸ್ಕೊಡ್‌ವೆಸ್‌ನ ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ, ಯೋಜನಾ ಸಂಯೋಜಕ ಯಶವಂತ ಗೌಡ ಈ ಕಾರ್ಯಕ್ರಮ ನಿರ್ವಹಣೆ ಜವಾಬ್ದಾರಿ ನಿಭಾಯಿಸಿದರು.
