ಹೊನ್ನಾವರದ ಜೀವನದಿ ಶರಾವತಿಗೆ ಅಡ್ಡಲಾಗಿ ಸರ್ಕಾರ ಪಂಪ್ ಸ್ಟೋರೇಜ್ ಯೋಜನೆ ರೂಪಿಸಲು ಸಿದ್ಧತೆ ನಡೆಸಿದ್ದು, ಇದಕ್ಕೆ ಜಯಕರ್ನಾಟಕ ಜನಪರ ವೇದಿಕೆ ವಿರೋಧವ್ಯಕ್ತಪಡಿಸಿದೆ.
`ಜಯಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ ಗುಣರಂಜನ್ ಶೆಟ್ಟಿ ಅವರ ನೇತೃತ್ವದಲ್ಲಿ ನಾಡಿನ ನೆಲಜಲ ಭಾಷೆ ಹಾಗೂ ಪರಿಸರ ರಕ್ಷಣೆಗೆ ನಿರಂತರ ಹೋರಾಟ ಮುಂದುವರೆದಿದೆ. ಅದರ ಭಾಗವಾಗಿ ಪರಿಸರಕ್ಕೆ ಹಾನಿಯಾಗುವ ಶರಾವತಿ ಪಂಪ್ಡ್ ಸ್ಟೋರೆಜ್ ಯೋಜಯನ್ನು ನಾವು ವಿರೋಧಿಸುತ್ತೇವೆ’ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ದಿಲೀಪ್ ಅರ್ಗೇಕರ ಹೇಳಿದ್ದಾರೆ. `ಈ ಯೋಜನೆಯಿಂದ 16 ಸಾವಿರ ಮರಗಳ ಮಾರಣ ಹೋಮ ನಡೆಯಲಿದೆ. ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶದಲ್ಲಿ ಇಂಥ ಯೋಜನೆ ಮಾಡುವುದು ಸೂಕ್ತವಲ್ಲ’ ಎಂದವರ ಹೇಳಿದ್ದಾರೆ.
`ವಿದ್ಯುತ್ ಉತ್ಪಾದನೆ ಮಾಡುವುದೇ ಆದರೆ ಸೋಲಾರ್, ವಿಂಡ್ ಪವರ್ ಉತ್ಪಾದನೆ ಮಾಡಲು ಅವಕಾಶ ಕೊಡಲಿ. ಪಶ್ಚಿಮ ಘಟ್ಟದಲ್ಲಿ ಸುರಂಗ ಕೊರೆದು ವಿದ್ಯುತ್ ಉತ್ಪಾದನೆ ಮಾಡುವ ಅವಶ್ಯಕತೆ ಇಲ್ಲ. ಶರಾವತಿ ನದಿ ನೀರು ಹಿಡಿದಿಟ್ಟರೇ ಉಪ್ಪು ನೀರಿನ ಸಮಸ್ಯೆಯನ್ನ ಹೊನ್ನಾವರದ ಹಲವು ಗ್ರಾಮದ ಜನರು ಅನುಭವಿಸುವ ಪರಿಸ್ಥಿತಿ ಬರಲಿದೆ. ಅಲ್ಲದೇ ನದಿ ನೀರು ಸಮರ್ಪಕವಾಗಿ ಸಮುದ್ರಕ್ಕೆ ಸೇರದೆ ಇದ್ದರೆ ಮತ್ಸ್ಯ ಸಂತತಿ ಮೇಲೆ ಪರಿಣಾಮ ಬೀಳಲಿದೆ’ ಎಂದವರು ವಿವರಿಸಿದ್ದಾರೆ.
`ಪರಿಸರಕ್ಕೆ ಹಾನಿಯಾಗಲಿರುವ ಯೋಜನೆಯನ್ನ ಸರ್ಕಾರ ಕೈಬಿಡಲಿ. ಇಲ್ಲದಿದ್ದರೆ ಸಾರ್ವಜನಿಕರ ಹೋರಾಟಕ್ಕೆ ನಮ್ಮ ಸಂಘಟನೆ ಸಹ ಬೆಂಬಲ ನೀಡಲಿದೆ’ ಎಂದು ಸಂಘಟನೆಯ ಜಿಲ್ಲಾ ಕಾರ್ಯಧ್ಯಕ್ಷರಾದ ರೋಷನ್ ಹರಿಕಂತ್ರ, ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಸುದೇಶ್ ನಾಯ್ಕ್, ಸಂಘಟನೆ ಜಿಲ್ಲಾ ಉಪಾಧ್ಯಕ್ಷರಾದ ಸುನಿಲ್ ತಾಂಡೇಲ್, ಪ್ರದೀಪ್ ಶೆಟ್ಟಿ, ರಫೀಕ್ ಉದ್ದಾರ್, ತಾಲೂಕಾ ಅಧ್ಯಕ್ಷರಾದ ಮೋಹನ್ ಉಳ್ಳೇಕರ್ ಹೇಳಿದ್ದಾರೆ.
Discussion about this post