ಅಂಕೋಲಾ – ಹುಬ್ಬಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಟ್ಯಾಂಕರಿಗೆ ಯಲ್ಲಾಪುರದ ಅರಬೈಲ್ ಘಟ್ಟ ಪ್ರದೇಶದಲ್ಲಿ ಬೆಂಕಿ ತಗುಲಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರ ಸಮಯಪ್ರಜ್ಞೆಯಿಂದಾಗಿ ಭಾರೀ ಪ್ರಮಾಣದ ಅನಾಹುತ ತಪ್ಪಿದೆ. ಬೆಂಕಿ ದೊಡ್ಡ ಪ್ರಮಾಣ ತಲುಪುವ ಹಂತದಲ್ಲಿದ್ದು, ಡಿಸೇಲ್ ಟ್ಯಾಂಕರ್ ಬಳಿ ಸಮೀಪಿಸುವ ಮುನ್ನ ರಕ್ಷಣಾ ಸಿಬ್ಬಂದಿ ಅದನ್ನು ಆರಿಸಿದರು.
ಮಂಗಳವಾರ ರಾತ್ರಿ ಡೀಸಲ್ ತುಂಬಿದ ಟ್ಯಾಂಕರ್ ಈ ಮಾರ್ಗದಲ್ಲಿ ಸಂಚರಿಸುತ್ತು. ಘಟ್ಟ ಪ್ರದೇಶದಲ್ಲಿ ಟ್ಯಾಂಕರಿನ ಟಯರ್’ಗಳು ಏಕಾಏಕಿ ಹೊತ್ತಿ ಉರಿಯತೊಡಗಿದವು. ತಕ್ಷಣ ಅಲ್ಲಿದ್ದ ಜನ ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದರು. ಅಗ್ನಿಶಾಮಕ ಸಿಬ್ಬಂದಿ ಜೊತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು.
ಡೀಸೆಲ್ ಟ್ಯಾಂಕರ್ ಚಲಿಸುತ್ತಿದ್ದಾಗಲೇ ಏಕಾಏಕಿ ಹಿಂದಿನ ಟಯರಿಗೆ ಬೆಂಕಿ ಹತ್ತಿಕೊಂಡಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಟಯರ್ ಹಾಗೂ ರಸ್ತೆ ನಡುವಿನ ಘಷಣೆ ಅಗ್ನಿ ಅನಾಹುತಕ್ಕೆ ಕಾರಣ ಎನ್ನಲಾಗುತ್ತಿದೆ. ಬೆಂಕಿ ಕಂಡ ಚಾಲಕ ಟ್ಯಾಂಕರನ್ನು ಅಲ್ಲಿಯೇ ನಿಲ್ಲಿಸಿ ದೂರ ಸರಿದಿದ್ದಾರೆ. ಅಷ್ಟೊತ್ತಿಗೆ ಅಲ್ಲಿಗೆ ಆಗಮಿಸಿದ ರಕ್ಷಣಾ ತಂಡದವರು ಬೆಂಕಿ ಆರಿಸಿದ್ದಾರೆ.
ಈ ಅಗ್ನಿ ಅವಘಡದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೂವರೆ ತಾಸುಗಳ ಕಾಲ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ನಂತರ ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.
ಟ್ಯಾಂಕರಿಗೆ ಬೆಂಕಿ ಹೊತ್ತಿದ ದೃಶ್ಯಾವಳಿ ಇಲ್ಲಿ ನೋಡಿ..
