ಕಾರವಾರ: ಮುದುಗಾ ಬಂದರು ಬಳಿ ಮೀನುಗಾರಿಕೆಗೆ ತೆರಳಿದ ಮೀನುಗಾರರ ಮೇಲೆ ಭಾರತೀಯ ನೌಕಾ ಸಿಬ್ಬಂದಿ ದರ್ಪ ತೋರಿದ್ದಾರೆ. ಮೀನುಗಾರಿಕೆಗೆ ಬಳಸುವ ಬಲೆಗಳನ್ನು ತುಂಡರಿಸುವ ಮೂಲಕ ಬಡ ಮೀನುಗಾರರ ಬದುಕಿಗೆ ಕೊಳ್ಳಿ ಇಟ್ಟಿದ್ದಾರೆ.
ಬುಧವಾರ ದಾಮೋದರ ತಾಂಡೇಲ್ ಅವರು ತಮ್ಮ ವೀರ ಗಣಪತಿ ಎಂಬ ಹೆಸರಿನ ಬೋಟಿನ ಮೂಲಕ ಮೀನುಗಾರಿಕೆಗೆ ತೆರಳಿದ್ದರು. ಆಗ ಏಕಾಏಕಿ ದಾಳಿ ನಡೆಸಿದ ನೌಕಾದಳದ ಸಿಬ್ಬಂದಿ ಮೀನುಗಾರನ ಬಲೆಗಳನ್ನು ಎಳೆದೊಯ್ದಿದ್ದಾರೆ. ಸ್ಥಳೀಯ ಮೀನುಗಾರರು ಎಂದಿಗೂ ಸೀಬರ್ಡ ನೌಕಾನೆಲೆ ಒಳಗೆ ಅಕ್ರಮವಾಗಿ ಪ್ರವೇಶಿಸಿಲ್ಲ. ಅದಾಗಿಯೂ ಅಧಿಕಾರ ಚಲಾಯಿಸಿದ ನೌಕಾನೆಲೆಯವರು ಮೀನುಗಾರನಿಗೆ ನಷ್ಟ ಮಾಡಿದ್ದಾರೆ.
ಕಾರವಾರ – ಅಂಕೋಲಾ ಭಾಗದ ಮೀನುಗಾರರು ನೌಕಾನೆಲೆಗಾಗಿ ಭೂಮಿ ಬಿಟ್ಟು ಕೊಟ್ಟವರು. ಅನೇಕರಿಗೆ ಈವರೆಗೂ ಭೂಮಿಗೆ ತಕ್ಕ ಪರಿಹಾರ ದೊರೆತಿಲ್ಲ ಅದಾಗಿಯೂ ದೇಶದ ರಕ್ಷಣೆ ಹಾಗೂ ಭದ್ರತೆ ವಿಷಯವಾಗಿ ಮಾತನಾಡುವುದು ಬೇಡ ಎಂಬ ನಿಟ್ಟಿನಲ್ಲಿ ಮೀನುಗಾರರು ಮೌನವಾಗಿದ್ದಾರೆ. ಹೀಗಿರುವಾಗ ಮೀನುಗಾರರ ಬಲೆಗಳನ್ನು ತುಂಡರಿಸುವಷ್ಟರ ಮಟ್ಟಿಗೆ ನೌಕಾ ಸಿಬ್ಬಂದಿ ದರ್ಪ ಮೆರೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.