37 ವರ್ಷ ಕಳೆದರೂ ಮದುವೆಯಾಗದ ಕಾರಣ ಜೊಯಿಡಾ ಚಾಂದೇವಾಡಿಯ ಬಾಲಚಂದ್ರ ಚೌದರಿ ಎಂಬಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದುವೆ ಮಾತುಕಥೆಗೆ ಬಂದ ಹೆಣ್ಮಕ್ಕಳು ಆತನಿಗೆ ನಿಂದಿಸುತ್ತಿರುವುದೇ ಆತ್ಮಹತ್ಯೆಗೆ ಮುಖ್ಯ ಕಾರಣ.
ಕೃಷಿ ಜೊತೆ ಪೇಂಟಿoಗ್ ಕೆಲಸವನ್ನು ಮಾಡುತ್ತಿದ್ದ ಬಾಲಚಂದ್ರ ಚೌದರಿಗೆ ಕಳೆದ 5 ವರ್ಷಗಳಿಂದ ಮದುವೆಗಾಗಿ ವಧು ಹುಡುಕಾಟ ನಡೆದಿತ್ತು. ಆತನ ತಂದೆ ಗಜಾನನ ಚೌದರಿ ಸಹ ಮಗನ ಮದುವೆಗೆ ಸಾಕಷ್ಟು ಓಡಾಟ ನಡೆಸಿದ್ದರು. ಹಲವು ಸಲ ಸಂಬoಧಿಕರ ಸಮ್ಮುಖದಲ್ಲಿ ಮದುವೆ ಮಾತುಕಥೆವರೆಗೆ ಬಂದಿತ್ತು. ಆದರೆ, ಮದುವೆಗೆ ಸಿದ್ಧವಾಗಿದ್ದ ಹುಡುಗಿಯರು ನಂತರ ಒಂದಿಲ್ಲೊoದು ಕಾರಣ ನೀಡಿ ಆತನನನ್ನು ನಿರಾಕರಿಸುತ್ತಿದ್ದರು.
`ತನ್ನ ವಯಸ್ಸಿನ ಎಲ್ಲರೂ ಮದುವೆ ಆಗಿ ಮಕ್ಕಳ ಜೊತೆ ಬದುಕುತ್ತಿದ್ದು, ತನಗೆ ಮಾತ್ರ ಮದುವೆ ಆಗಿಲ್ಲ\’ ಎಂದು ಬಾಲಚಂದ್ರ ಚೌದರಿ ಎಲ್ಲಡೆ ಹೇಳಿಕೊಂಡಿದ್ದರು. ಕೆಲ ದಿನಗಳಿಂದ ಮದುವೆಯ ಬಗ್ಗೆ ಮಾತನಾಡಿದರೆ ಮುನಿಸಿಕೊಳ್ಳುತ್ತಿದ್ದರು. `ಬಾಲಚಂದ್ರನಿಗೆ ಮಾತ್ರ ಕಂಕಣ ಭಾಗ್ಯ ಕೂಡಿ ಬಂದಿಲ್ಲ\’ ಎಂದು ಅವರ ತಂದೆ ಗಜಾನನ ಚೌದರಿ ಸಹ ಸಾಕಷ್ಟು ನೊಂದಿದ್ದರು. ಮತ್ತೆ ಹೆಣ್ಣು ನೋಡುವ ಬಗ್ಗೆ ಮಾತನಾಡಿದಾಗಲೆಲ್ಲ `ನನಗೆ ಮದುವೆಯೇ ಬೇಡ\’ ಎಂದು ಹೇಳುವಷ್ಟರ ಮಟ್ಟಿಗೆ ಬಾಲಚಂದ್ರ ನೊಂದಿದ್ದರು.
ಸೆ 16ರಂದು ರಾಮನಗರದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಬೈಕ್ ಏರಿ ಹೋದ ಬಾಲಚಂದ್ರ ಚೌದರಿ ಮಧ್ಯಾಹ್ನ ಊಟಕ್ಕೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಅವರ ತಂದೆ ಗಜಾನನ ಚೌದರಿ ಫೋನ್ ಮಾಡಿದ್ದು, ಆತ ಫೋನ್ ಸ್ವೀಕರಿಸಿಲ್ಲ. `ತನ್ನ ಮಗ ರಾಮನಗರದಲ್ಲಿರುವ ಸಂಬ0ಧಿ ವಿಠೋಭಾ ಚೌದರಿ ಮನೆಗೆ ಊಟಕ್ಕೆ ಹೋಗಿರಬೇಕು\’ ಎಂದು ಗಜಾನನ ಚೌದರಿ ಅಲ್ಲಿ ಫೋನ್ ಮಾಡಿದ್ದರು. ಆದರೆ, ವಿಠೋಭಾ ಚೌದರಿ ಕುಟುಂಬದವರು ಸೆ 16ರಂದು ಗಣಪತಿ ವಿಗ್ರಹ ನೋಡುವುದಕ್ಕಾಗಿ ಬೆಳಗಾವಿಗೆ ಹೊರಟಿದ್ದರು. ರಾತ್ರಿ ಕಳೆದರೂ ಮಗ ಮನೆಗೆ ಬರದ ಕಾರಣ ಗಜಾನನ ಚೌದರಿ ಆತಂಕಗೊ0ಡಿದ್ದರು.
ಇದನ್ನೂ ಓದಿ: ಸಪ್ತಪದಿ ಸಡಗರಕ್ಕೆ ಸರ್ಕಾರವೇ ಸಾಕ್ಷಿ!
ಸೆ 17ರಂದು ಬೆಳಗ್ಗೆ ಗಜಾನನ ಚೌದರಿ ಅವರಿಗೆ ಫೋನ್ ಮಾಡಿದ ವಿಠ್ಠೋಬಾ ಚೌದರಿ ಲೋಂಡಾಗೆ ಬರುವಂತೆ ಕರೆದಿದ್ದು, ಅಲ್ಲಿ ಹೋಗಿ ನೋಡಿದಾಗ ಅರಣ್ಯ ಇಲಾಖೆ ನರ್ಸಿರಿ ಬಳಿ ಬಾಲಚಂದ್ರ ಚೌದರಿ ನೇಣಿಗೆ ಶರಣಾಗಿರುವುದು ಕಾಣಿಸಿತು. ಮಗನ ಶವದ ಎದುರು ತಂದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.