ಕಾರವಾರ: `ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದು, ಎಲ್ಲಾ ಗ್ರಾ ಪಂ ವ್ಯಾಪ್ತಿಯಲ್ಲಿ ನರೆಗಾ ಯೋಜನೆ ಕೆಲಸ ಶುರು ಮಾಡಬೇಕು\’ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಹೇಳಿದರು.
ಅವರು ಬುಧವಾರ ನರೆಗಾ ಸಭೆ ನಡೆಸಿದ ಅವರು `ನರೆಗಾ ಯೋಜನೆ ಅಡಿ ಶಾಲಾ ಕಾಂಪೌAಡ್, ಶೌಚಾಲಯ, ಆಟದ ಮೈದಾನ, ಕೊಳವೆ ಬಾವಿ ಮರುಪೂರಣ ಘಟಕ ನಿರ್ಮಾಣ ಕಾಮಗಾರಿಗಳನ್ನು ನಡೆಸಬೇಕು\’ ಎಂದು ಸೂಚಿಸಿದರು. `ಮಾನವ ದಿನಗಳ ಸೃಜನೆ ಪ್ರಮಾಣ ಕಡಿಮೆ ಇರುವ ಗ್ರಾಮ ಪಂಚಾಯತಿಗಳ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಕಡಿಮೆ ಮಾನವ ದಿನ ಸೃಜಿಸುವ ಗ್ರಾಮಗಳನ್ನು ಕೇಂದ್ರೀಕರಿಸಿ ಹೆಚ್ಚೆಚ್ಚು ಐಇಸಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು\’ ಎಂದರು.
ಮಕ್ಕಳ ಮನಗೆದ್ದ ಸಾವಯವ ರಂಗೋಲಿ
ಯಲ್ಲಾಪುರ: ಕೊಂಡೆಮನೆ ಸರ್ಕಾರಿ ಶಾಲೆಯಲ್ಲಿ ಸಿರಿದಾನ್ಯಗಳನ್ನು ಬಳಸಿ ರಂಗೋಲಿ ಚಿತ್ರಿಸಲಾಗಿದ್ದು, ನೋಡುಗರ ಕಣ್ಮನ ಸೆಳೆಯಿತು. ಪೋಷಣಾ ಅಭಿಯಾನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಬೃಹತ್ ರಂಗೋಲಿ ರಚಿಸಿದ್ದರು.
ರವಿ ಅಂಬಾಡೆಗೆ ಕೃಷಿ ಸಾಧಕ ಪ್ರಶಸ್ತಿ
ಜೋಯಿಡಾ: ಉತ್ತರಕನ್ನಡ ಜಿಲ್ಲಾ ಸಹಕಾರ ಸಾವಯುವ ಕೃಷಿಕರ ಸಂಘಗಳ ಒಕ್ಕೂಟ ನೀಡುವ ಸಾವಯುವ ಕೃಷಿ ಸಾಧಕ ಪ್ರಶಸ್ತಿ ಫಣಸೋಲಿಯ ರವೀಂದ್ರ ಸಾಂಬಾ ಭಟ್ಟ ಅವರಿಗೆ ಸಿಕ್ಕಿದೆ. ಜಿಲ್ಲಾ ಸಾವಯುವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ ಶಿರಸಿ, ಜೋಯಿಡಾ ತಾಲೂಕು ಅಧ್ಯಕ್ಷ ತುಕಾರಾಮ ಗವಸ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಕೃಷಿ ಸಂಘಕ್ಕೆ 40 ಲಕ್ಷ ರೂ ಲಾಭ: ಅಡಿಕೆ ಮಾರಿದವರಿಗೆ 4 ಲಕ್ಷ ರೂ ನೆರವು
ಯಲ್ಲಾಪುರ: ಮಾವಿನಮನೆ ಪ್ರಾಥಮಿಕ ಸಹಕಾರಿ ಸಂಘಕ್ಕೆ ಕಳೆದ ಬಾರಿ 40 ಲಕ್ಷ ರೂ ಲಾಭವಾಗಿದೆ. ವಾರ್ಷಿಕ ಸಭೆಯಲ್ಲಿ ಆಡಳಿತ ಮಂಡಳಿಯವರು ಈ ವಿಷಯ ತಿಳಿಸಿದ್ದಾರೆ.
ಮಲವಳ್ಳಿ ಶ್ರೀ ರಾಮಲಿಂಗೇಶ್ವರ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಆಡಳಿತ ಮಂಡಳಿಯವರು ಅಡಿಕೆ ಕಾಳುಮೆಣಸು ಮಾಡಿದವರಿಗೆ 401698ರೂ ಹಾಗೂ ಕಿರಾಣಿ ಗ್ರಾಹಕರಿಗೆ ರೂ 207621 ರೂ ಪ್ರೋತ್ಸಾಹಧನ ನೀಡಿರುವುದಾಗಿ ತಿಳಿಸಿದ್ದಾರೆ. ಈ ಹಿಂದಿನ ಎಲ್ಲಾ ವರ್ಷಗಳಿಗಿಂತ ಕಳೆದ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಸಂಘದ ಮೂಲಕ ಅಡಿಕೆ ವಿಕ್ರಿ ನಡೆದಿದೆ.
ಸಿಂಪಿ ಸಹಕಾರಿಗೆ 5 ಲಕ್ಷ ರೂ ಲಾಭ
ದಾಂಡೇಲಿ: ನಗರದ ಭಾವಸಾರ ನಾಮದೇವ ಸಿಂಪಿ ಸಮಾಜದ ಸಹಕಾರಿ ಸಂಘದ 10 ವರ್ಷದ ವಾರ್ಷಿಕ ಸಭೆಯು ರೋಟರಿ ಸಭಾಭವನದಲ್ಲಿ ಜರುಗಿತು.
`ಈ ಸಹಕಾರಿ ಸಂಘವು ರೂ. 5,32,000 ಲಾಭದಲ್ಲಿದೆ. ಇದೇ ರೀತಿ ಸಂಘದ ಸರ್ವ ಸದಸ್ಯರು ಸಂಘದ ಪುರೋ ಅಭಿವೃದ್ಧಿಗೆ ಎಂದಿನ0ತೆ ಸಹಕಾರ ನೀಡಬೇಕು\’ ಎಂದು ಆಡಳಿತ ಮಂಡಳಿಯವರು ಮನವಿ ಮಾಡಿದರು.
ಹೈನುಗಾರಿಕೆ ಬಗ್ಗೆ ಮಹಿಳೆಯರಿಗೆ ನಡೆದ ತರಬೇತಿ
ಹಳಿಯಾಳ: `ಪ್ರತಿನಿತ್ಯ ಆಕಳುಗಳಿಗೆ ಹಸಿ ಮೇವು, ಒಣಮೇವು ಜೊತೆ ದ್ವಿದಳ ಧಾನ್ಯಗಳನ್ನು ಸಂಗ್ರಹಿಸಿ ನೀಡುವುದರಿಂದ ಅವುಗಳ ಬೆಳವಣಿಗೆಗೆ ಸಹಾಯಕಾರಿಯಾಗುತ್ತದೆ\’ ಎಂದು ಪಶು ಸಂಗೋಪನೆ ಇಲಾಖೆಯ ವೈದ್ಯಾಧಿಕಾರಿ ಡಾ ನದಾಫ್ ಹೇಳಿದರು.
ತಿಪ್ಪಿನಗೇರಾ ಗ್ರಾಮದಲ್ಲಿ ಮನುವಿಕಾಸ ಸಂಸ್ಥೆ ಮತ್ತು ಇಡಲ್ ಗಿವ್ ಫೌಂಡೇಶನ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಮಹಿಳೆಯರಿಗೆ ಹೈನುಗಾರಿಕೆ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಿದರು. ಆಕಳುಗಳಿಗೆ ಕಂಡುಬರುವ ಕೆಚ್ಚಲ ಬಾವು ರೋಗ ಬಂದಾಗ ನೀಡಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆ ಈ ವೇಳೆ ಮಾಹಿತಿ ನೀಡಿದರು.
ಮೀನುಗಾರರ ಬದುಕು ಸಮುದ್ರ ಪಾಲಾಗುವ ಆತಂಕ: ತಡೆಗೋಡೆಗೆ ಮನವಿ
ಅಂಕೋಲಾ: ಸಮುದ್ರದ ಅಲೆಗಳಿಂದ ಆಗಬಹುದಾದ ಅನಾಹುತವನ್ನು ತಪ್ಪಿಸಲು ತಡೆಗೋಡೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಮಂಜಗುಣಿ ಗ್ರಾಮಸ್ಥರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಿದರು.
`ಅಂಕೋಲಾ ತಾಲೂಕಿನ ಹೊನ್ನೆಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಳಗಿನ ಮಂಜಗುಣಿಯ ಸಮುದ್ರ ನದಿಯ ತೀರದಲ್ಲಿ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಸುಮಾರು 25 ವರ್ಷಗಳ ಹಿಂದೆ ಸಮುದ್ರ ಕೊರೆತ ಹೆಚ್ಚಾಗಿ ಸುಮಾರು 800 ಮೀಟರ್ನಷ್ಟು ಉದ್ದವಾದ ದೊಡ್ಡ ಬಂಡೆ ಕಲ್ಲುಗಳಿಂದ ತಡೆಗೋಡೆ ಹಾಕಲಾಗಿತ್ತು. ಆದರೆ ಅದೀಗ ಗಂಗಾವಳಿ ನದಿಯ ನೆರೆಹಾವಳಿ ಹಾಗೂ ಸಮುದ್ರದ ರಕ್ಕಸ ಆಕಾರದ ಅಲೆಗಳಿಂದ ಸಂಪೂರ್ಣ ತಡೆಗೋಡೆ ಕುಸಿದು ಬೀಳುತ್ತಿದೆ\’ ಎಂದವರು ವಿವರಿಸಿದರು.
`ನದಿಯ ತೀರದಲ್ಲಿ ಹೆಚ್ಚಾಗಿ ಬಡ ಮೀನುಗಾರರು ಹಾಗೂ ರೈತರು ವಾಸಿಸುತ್ತಿದ್ದು, ಮನೆಯ ಜಾಗ ಬಿಟ್ಟರೆ ಬೇರೆ ಯಾವುದೇ ನಿವೇಶನವಿಲ್ಲ. ಕಡಲ ಕೊರೆತದಿಂದ ಭಯದ ವಾತಾವರಣ ಸೃಷ್ಟಿಯಾಗಿದ್ದು, ಇರುವ ಮನೆಗಳನ್ನು ಕಳೆದುಕೊಂಡರೆ ನಾವು ನಿರ್ಗತಿಕರಾಗಿಬಿಡುವ ಆತಂಕದಲ್ಲಿ ಜೀವಿಸುತ್ತಿದ್ದೇವೆ\’ ಎಂದು ಅಳಲು ತೋಡಿಕೊಂಡರು.