ಕಾರವಾರದ ಹಬ್ಬುವಾಡ ರಸ್ತೆ ಹದಗೆಟ್ಟಿದ್ದು, ಅದನ್ನು ದುರಸ್ಥಿ ಮಾಡಬೇಕು ಎಂದು ಆಗ್ರಹಿಸಿ ಆಟೋ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಆಟೋ ಚಾಲಕರ ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ (ಗಜಸೇನೆ)ಯವರು ಬೆಂಬಲ ನೀಡಿದ್ದಾರೆ.
ಹದಗೆಟ್ಟ ರಸ್ತೆ ವಿರುದ್ಧ ಹರಿದೇವನಗರ ಬಳಿ ಬುಧವಾರ ದಿಢೀರ್ ಪ್ರತಿಭಟನೆ ನಡೆದಿದೆ. ಹಬ್ಬುವಾಡ ರಸ್ತೆ ಪೂರ್ತಿಯಾಗಿ ಹಾಳಾದ ಬಗ್ಗೆ ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದ್ದಾರೆ. `ಮಳೆಗಾಲದ ನಂತರ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿದೆ. ಈ ಭಾಗದ ಸಂಚಾರ ಅಸ್ತವ್ಯಸ್ಥವಾಗಿದೆ. ಪ್ರತಿಯೊಬ್ಬ ಸಾರ್ವಜನಿಕರು ಇದರಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ’ ಎಂದು ಆಟೋ ಚಾಲಕರು ದೂರಿದ್ದಾರೆ.
`ರಸ್ತೆ ಹಾಳಾದ ಬಗ್ಗೆ ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಶಾಲಾ ಮಕ್ಕಳು ನಿತ್ಯ ಸಮಸ್ಯೆ ಅನುಭವಿಸುತ್ತಿರುವ ಬಗ್ಗೆ ಜಿಲ್ಲಾಡಳಿತವೂ ತಲೆಕೆಡಿಸಿಕೊಂಡಿಲ್ಲ. ಹೊಂಡದ ರಸ್ತೆಯಲ್ಲಿ ಕೆಸರು ತುಂಬಿದ್ದು, ವಾಹನಗಳ ಓಡಾಟದ ವೇಳೆ ಅವು ಪಾದಚಾರಿಗೆ ಸಿಡಿಯುವ ಬಗ್ಗೆ ಅರಿವಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಅಲ್ಲಿನವರು ಆಕ್ರೋಶವ್ಯಕ್ತಪಡಿಸಿದ್ದಾರೆ.
ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜಿ ಅವರು `ರಸ್ತೆ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಮಳೆ ಕಡಿಮೆಯಾದ ಕೂಡಲೇ ಇಸ್ಕಾನ್ ಬಳಿಯಿಂದ ರಸ್ತೆ ಕಾಮಗಾರಿ ಶುರು ಮಾಡಲಾಗುತ್ತದೆ’ ಎಂಬ ಭರವಸೆ ನೀಡಿದ್ದಾರೆ.
Discussion about this post