ಭಟ್ಕಳದ ಸಿವಿಲ್ ಇಂಜಿನಿಯರ್ ಅಹ್ಮದ್ ಅವರ ಸಾವಿನ ಪ್ರಕರಣ ತನಿಖೆ ನಡೆಸಿದ ಪೊಲೀಸರಿಗೆ ಆ ಸಾವು ಆಕಸ್ಮಿಕ ಅಲ್ಲ ಎಂದು ಅರಿವಿಗೆ ಬಂದಿದೆ. ದುರುದ್ದೇಶಪೂರ್ವಕವಾಗಿ ದುಷ್ಕರ್ಮಿಗಳು ಅಹ್ಮದ್ ಅವರನ್ನು ಕೊಲೆ ಮಾಡಿದ ಬಗ್ಗೆ ತನಿಖೆಯಲ್ಲಿ ಗೊತ್ತಾಗಿದೆ.
ಭಟ್ಕಳದ ಮೋಟಿಯಾ ಗಾರ್ಡನ್ ಮದಿನಾ ಕಾಲೋನಿಯ ಫಿರ್ದೋಸ್ ನಗರದ ಜಾಮಿಯಾಬಾದ್ ರೋಡಿನ ಬಳಿ ಅಹ್ಮದ್ ಫಹಾದ್ ಫಾರೂಕ್ ಮೋಟಿಯಾ (37) ಅವರು ವಾಸವಾಗಿದ್ದರು. ಸಿವಿಲ್ ಇಂಜಿನಿಯರ್ ಆಗಿ ಅವರು ಕೆಲಸ ಮಾಡಿಕೊಂಡಿದ್ದರು. 2024ರ ಅವಧಿಯಲ್ಲಿ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ಸಾವಿನ ತನಿಖೆ ಶುರು ಮಾಡಿದ್ದರು.
ಈ ತನಿಖೆಯಲ್ಲಿ ದುಷ್ಕರ್ಮಿಗಳು ದ್ವೇಷದಿಂದ ಅಹ್ಮದ್ ಅವರನ್ನು ಕೊಲೆ ಮಾಡಿರುವ ಅನುಮಾನ ಪೊಲೀಸರನ್ನು ಕಾಡಿತು. ಆ ಬಗ್ಗೆ ಸಮಗ್ರ ತನಿಖೆಗೆ ಇಳಿದಾಗ ಆ ಅನುಮಾನ ನಿಜವಾಯಿತು. ಯಾವುದೋ ಹಳೆಯ ದ್ವೇಷದಿಂದ ದುಷ್ಕರ್ಮಿಗಳು ಅಹ್ಮದ್ ಅವರನ್ನು ಕೊಲೆ ಮಾಡಿದ ಬಗ್ಗೆ ಪಿಎಸ್‌ಐ ರನ್ನಗೌಡ ಪಾಟೀಲ್ ಅವರು ಖಚಿತಪಡಿಸಿಕೊಂಡರು.
ಆದರೆ, ಕೊಲೆ ಮಾಡಿದ ದುಷ್ಕರ್ಮಿಗಳು ಯಾರು ಎಂದು ಗೊತ್ತಾಗಲಿಲ್ಲ. ಅವರ ಪತ್ತೆಗಾಗಿ ಪಿಎಸ್‌ಐ ರನ್ನಗೌಡ ಪಾಟೀಲ್ ಅವರು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣವೊಂದನ್ನು ದಾಖಲಿಸಿದರು. ಸದ್ಯ, ಕೊಲೆ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
Discussion about this post