ಉತ್ತರ ಕನ್ನಡ ಜಿಲ್ಲೆಯ 12 ತಹಶೀಲ್ದಾರ್ ಹಾಗೂ ನಾಲ್ವರು ಉಪವಿಭಾಗಾಧಿಕಾರಿಗಳ ವಿರುದ್ಧ ಲೋಕಾಯುಕ್ತರು ಪ್ರಕರಣ ದಾಖಲಿಸಿದ್ದಾರೆ. ಹುತಾತ್ಮ ಯೋಧರಿಗೆ ಅನ್ಯಾಯ ಹಾಗೂ ನಿವೃತ್ತ ಯೋಧರಿಗೆ ಅವಮಾನ ಆದ ಹಿನ್ನಲೆ ಲೋಕಾಯುಕ್ತರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಿದ್ದಾರೆ.
ನಿವೃತ್ತ ಯೋಧರ ಜೊತೆ ಹುತಾತ್ಮ ಯೋಧ ಅವಲಂಭಿತರಿಗೆ ಭೂಮಿ ಕೊಡಬೇಕು ಎಂದು ಕಾನೂನು ಹೇಳುತ್ತದೆ. ಇದರೊಂದಿಗೆ ಸ್ವಾತಂತ್ರö್ಯ ಹೋರಾಟಗಾರರಿಗೆ ಮತ್ತು ಅವರ ಅವಲಂಭಿತರಿಗೆ ಸಹ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿವೆ. ಆದರೆ, ಅಂಥವರಿಗೆ ಜಮೀನು ಹಾಗೂ ನಿವೇಶನ ಕೊಡುವಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಎಡವಿದ್ದಾರೆ. ಜೊತೆಗೆ ಫಲಾನುಭವಿಗಳು ಅನಗತ್ಯವಾಗಿ ಕಚೇರಿ ಅಲೆದಾಡುವಂತೆ ಮಾಡಿದ್ದಾರೆ. ಈ ವಿಷಯ ಲೋಕಾಯುಕ್ತರ ಗಮನಕ್ಕೆ ಬಂದಿದ್ದು, ಬೆಂಗಳೂರಿನ ಲೋಕಾಯುಕ್ತ ಕಚೇರಿಯಿಂದಲೇ ತಹಶೀಲ್ದಾರರು ಹಾಗೂ ಸಹಾಯ ಆಯುಕ್ತರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೆಲ ಪ್ರಕರಣಗಳಲ್ಲಿ ಅನೇಕ ವರ್ಷ ಕಳೆದರೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ. ಅನಗತ್ಯ ತೊಂದರೆ ಮಾಡುತ್ತಿರುವುದನ್ನು ಸಹ ಲೋಕಾಯುಕ್ತ ಅಧಿಕಾರಿಗಳು ಗಮನಿಸಿದ್ದಾರೆ. ಈ ಎಲ್ಲಾ ಹಿನ್ನಲೆ ಕಾರವಾರ, ಶಿರಸಿ, ಕುಮಟಾ, ಭಟ್ಕಳ ತಾಲೂಕಿನ ಉಪವಿಭಾಗಾಧಿಕಾರಿಗಳ ವಿರುದ್ಧ ಲೋಕಾಯುಕ್ತರು ಪ್ರಕರಣ ದಾಖಲಿಸಿದ್ದಾರೆ. ಅದರ ಜೊತೆ ಸಂತ್ರಸ್ತರಿಗೆ ನ್ಯಾಯ ಕೊಡುವಲ್ಲಿ ವಿಫಲರಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೋಯಿಡಾ, ದಾಂಡೇಲಿ ತಾಲೂಕಿನ ತಹಶೀಲ್ದಾರರ ವಿರುದ್ಧವೂ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಮಾಜಿ ಸೈನಿಕರು, ಸ್ವಾತಂತ್ರ‍್ಯ ಹೋರಾಟಗಾರರು ಮತ್ತು ಯೋಧರಿಗೆ ಸ್ವಾವಲಂಬಿ ಜೀವನ ನಡೆಸಿಕೊಂಡು ಹೋಗಲು ಸರ್ಕಾರ ಬೇರೆ ಬೇರೆ ರೀತಿಯ ಯೋಜನೆಗಳನ್ನು ಹೊಂದಿದೆ. ಭಾರತೀಯ ಸರ್ಕಾರ ಮತ್ತು ರಾಜ್ಯ ಸರ್ಕಾರದ ಈ ಯೋಜನೆಗಳನ್ನು ಅಧಿಕಾರಿಗಳು ಫಲಾನುಭವಿಗೆ ತಲುಪಿಸಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಕರ್ನಾಟಕ ಲೋಕಯುಕ್ತ ಕಾರವಾರದ ಪೊಲೀಸ್ ಅಧೀಕ್ಷಕರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
