ಖಾಸಗಿ ಕೆಲಸ ನಿರ್ವಹಿಸುವ ಗುತ್ತಿಗೆದಾರರೊಬ್ಬರು ಶಿರಸಿ ಗಣೇಶ ನಗರದ ಸಮೀಪದ ಅಂಗನವಾಡಿ ಬಳಿ ರಾಶಿ ರಾಶಿ ಸಿಮೆಂಟ್ ಚೀಲ ರಾಶಿ ಹಾಕಿದ್ದಾರೆ. ಸಿಮೆಂಟ್ ಧೂಳಿನ ಪರಿಣಾಮ ಅಲ್ಲಿನ ಮಕ್ಕಳು ಉಸಿರಾಡಲು ಸಮಸ್ಯೆ ಅನುಭವಿಸುತ್ತಿದ್ದಾರೆ.
ಸ್ಥಳೀಯರ ಮಾಹಿತಿ ಪ್ರಕಾರ ಕಳೆದ ಮೂರು ದಿನಗಳಿಂದ ಇಲ್ಲಿನ ಅಂಗನವಾಡಿ ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂಗನವಾಡಿ ಒಳಗೂ ಸಾಕಷ್ಟು ಪ್ರಮಾಣದಲ್ಲಿ ಧೂಳು ತುಂಬಿದ್ದು, ಗುರುವಾರ ಚಿಣ್ಣರು ಅಲ್ಲಿಯೇ ಹೊರಳಾಡುತ್ತಿರುವುದು ಕಾಣಿಸಿತು. ಮಕ್ಕಳು ಸಿಮೆಂಟ್ ಮಿಶ್ರಿತ ಧೂಳಿನಲ್ಲಿಯೇ ಆಟವಾಡುತ್ತಿದ್ದು, ಊಟಕ್ಕೆ ಸಹ ಅವರಿಗೆ ಬೇರೆ ಜಾಗ ಇಲ್ಲ. ಈ ಬಗ್ಗೆ ಮಕ್ಕಳು ಸಮಸ್ಯೆ ಹೇಳುವ ಪ್ರಯತ್ನ ಮಾಡಿದರಾದರೂ ಅವರಿಂದ ಮಾತು ಹೊರಡಲಿಲ್ಲ. ಪಾಲಕರು ಸಮಸ್ಯೆ ಬಗ್ಗೆ ಹೇಳಿದರೂ ಕೇಳುವವರಿರಲಿಲ್ಲ.
ಅಂಗನವಾಡಿಯ ಪ್ರವೇಶದ್ವಾರದಲ್ಲಿಯೇ ಭಾರೀ ಪ್ರಮಾಣದಲ್ಲಿ ಸಿಮೆಂಟ್ ರಾಶಿ ಹಾಕಲಾಗಿದೆ. ಅಂಗನವಾಡಿ ಸಮೀಪದಲ್ಲಿಯೇ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಕೆಲಸ ಮಾಡಲಾಗುತ್ತಿದೆ. ಅದರ ಸದ್ದು ಸಹ ಮಕ್ಕಳಿಗೆ ಮಾರಕವಾಗಿದೆ. ಮಕ್ಕಳಿರುವ ಪ್ರದೇಶದಲ್ಲಿಯೇ ಸಿಮೆಂಟ್ ಮಿಕ್ಸ ಮಾಡಿ ಸಮೀಪದ ರಸ್ತೆ ಕೆಲಸಕ್ಕೂ ಒಯ್ಯಲಾಗುತ್ತಿದೆ.
ಈ ಅಂಗನವಾಡಿ ಪಕ್ಕದಲ್ಲಿ ಸರ್ಕಾರಿ ಹೈಸ್ಕೂಲ್ ಸಹ ಇದೆ. ಇಲ್ಲಿನ ಧೂಳು ಆ ಪ್ರದೇಶವನ್ನು ಆವರಿಸುತ್ತಿದೆ. ಶಿರಸಿಯಲ್ಲಿ ಸಿಮೆಂಟ್ ಹಾಕಲು ಸಾಕಷ್ಟು ಸ್ಥಳಾವಕಾಶವಿದ್ದರೂ ಗುತ್ತಿಗೆದಾರ ಅಂಗನವಾಡಿ ಬಳಿಯೇ ಚೀಲ ರಾಶಿ ಹಾಕಿರುವುದಕ್ಕೆ ಆಕ್ರೋಶವ್ಯಕ್ತವಾಗಿದೆ. ಶಿಶು ಕೇಂದ್ರದ ಸಿಬ್ಬಂದಿಯೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು, ಈ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಭಯಪಡುತ್ತಿದ್ದರು.
Discussion about this post