ಅನಾಥವಾಗಿ ಬಿದ್ದಿದ್ದ ಹಾವಿನ ಮೊಟ್ಟೆಗಳನ್ನು ರಕ್ಷಿಸಿದ ಮುಂಡಗೋಡಿನ ಅರಣ್ಯ ಅಧಿಕಾರಿಗಳು ಅದಕ್ಕೆ ಕೃತಕವಾಗಿ ಕಾವು ಕೊಟ್ಟಿದ್ದಾರೆ. ಪರಿಣಾಮ ಆ ಮೊಟ್ಟೆಯಿಂದ 67 ಹಾವಿನ ಮರಿಗಳು ಹೊರ ಬಂದಿವೆ.
ಜುಲೈ 22ರಂದು ಮುಂಡಗೋಡಿನ ಪಾಳಾ ಅಂಗನವಾಡಿ ಬಳಿ ಚಿಕ್ಕ ಚಿಕ್ಕ ಮೊಟ್ಟೆಗಳು ಕಾಣಿಸಿದ್ದವು. ಅಪಾಯದಲ್ಲಿದ್ದ ಆ ಮೊಟ್ಟೆಗಳನ್ನು ಅರಣ್ಯ ಸಿಬ್ಬಂದಿ ಜೋಪಾನ ಮಾಡಿದ್ದರು. ನಂತರ ಆ ಮೊಟ್ಟೆಗಳನ್ನು ಅರಣ್ಯ ಸಿಬ್ಬಂದಿ ಮುತ್ತುರಾಜ ಹಳ್ಳಿ ಅವರ ಮನೆಯಲ್ಲಿರಿಸಲಾಯಿತು. ವೈಜ್ಞಾನಿಕ ಮಾದರಿಯಲ್ಲಿ ಅವುಗಳಿಗೆ ಕಾವು ಕೊಡುವ ಪ್ರಯತ್ನವೂ ನಡೆಯಿತು.
ಪಾಳಾ ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುನೀಲ ಹೊನ್ನಾವರ ಮುತ್ತುರಾಜ ಹಳ್ಳಿ ಸೇರಿ ನಿತ್ಯವೂ ಆ ಹಾವಿನ ಮೊಟ್ಟೆಗಳ ಚಲನ-ವಲನ ವೀಕ್ಷಿಸುತ್ತಿದ್ದರು. ಎರಡು ತಿಂಗಳುಗಳ ಕಾಲ ಆ ಮೊಟ್ಟೆಗಳನ್ನು ಗಮನಿಸಿದರು. ಕೃತಕವಾಗಿ ಕಾವು ಕೊಟ್ಟಿರುವುದು ಪರಿಣಾಮ ಬೀರಿದ್ದು, 67 ಮೊಟ್ಟಗಳಿಂದ ಹಾವಿನ ಮರಿಗಳು ಹೊರ ಬಂದವು.
ಆ ಎಲ್ಲಾ ಕೆರೆ ಹಾವುಗಳನ್ನು ಆರೈಕೆ ಮಾಡಿ ಕಾಡಿಗೆ ಬಿಡಲಾಯಿತು. ಕಾತೂರ ವಲಯ ಅರಣ್ಯಾಧಿಕಾರಿ ವೀರೇಶ ಅವರು ಮರಿಗಳನ್ನು ಕಾಡಿಗೆ ಬಿಟ್ಟು ಬಂದರು.
Discussion about this post