ಯಲ್ಲಾಪುರದ ದೇಶಪಾಂಡೆ ನಗರದ ಬಳಿ ಬೈಕ್ ಸವಾರನ ಮೇಲೆ ಲಾರಿ ಹತ್ತಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದು, ಬೈಕಿನ ಸಹಸವಾರ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ರಾಯಚೂರಿನ ಕ್ಯಾಮರಾಮೆನ್ ನರಸಿಂಹ ಬುಗಲಿ (24) ಅವರು ಯಲ್ಲಾಪುರದ ಪ್ರವಾಸಿ ತಾಣಗಳನ್ನು ಚಿತ್ರಿಕರಿಸಲು ಬಂದಿದ್ದರು. ಸೆ 19ರಂದು ಬೆಳಗ್ಗೆ ಅವರು ಹುಬ್ಬಳ್ಳಿಯಿಂದ ಯಲ್ಲಾಪುರ ಮಾರ್ಗವಾಗಿ ಬೈಕ್ ಓಡಿಸುತ್ತಿದ್ದರು. ಆ ಬೈಕಿನಲ್ಲಿ ಅದೇ ಊರಿನ ವೈ ನಾಗೇಶ ನಾಯಕ ಅವರು ಜೊತೆಗಾರರಾಗಿದ್ದರು.
ಕೋಳಿಕೇರಿ ಬಳಿಯ ದೇಶಪಾಂಡೆ ನಗರದ ಕ್ರಾಸಿನ ಬಳಿ ಲಾರಿಯೊಂದು ವೇಗವಾಗಿ ಬಂದಿದ್ದು, ಮುಂದಿದ್ದ ವಾಹನವನ್ನು ಹಿಂದಿಕ್ಕಿತು. ಅದಾದ ನಂತರ ಎದುರಿನಿಂದ ಬರುತ್ತಿದ್ದ ನರಸಿಂಹ ಬುಗಲಿ ಅವರ ಬೈಕಿಗೆ ಆ ಲಾರಿ ಡಿಕ್ಕಿ ಹೊಡೆಯಿತು. ಲಾರಿ ಬೈಕಿಗೆ ಗುದ್ದಿದನ್ನು ಗಮನಿಸಿದರೂ ಲಾರಿ ಚಾಲಕ ತನ್ನ ವಾಹನ ನಿಲ್ಲಿಸಲಿಲ್ಲ. ಲಾರಿಯ ವೇಗವನ್ನು ಇನ್ನಷ್ಟು ಹೆಚ್ಚಿಸಿದ್ದರಿಂದ ನರಸಿಂಹ ಬುಗಲಿ ಅವರ ತಲೆ ಲಾರಿಯ ಹಿಂದಿನ ಚಕ್ರದ ಅಡಿ ಸಿಲುಕಿತು. ಕ್ಯಾಮರಾಹೊಂದಿದ್ದ ನರಸಿಂಹ ಬುಗಲಿ ಅಲ್ಲಿಯೇ ಸಾವನಪ್ಪಿದರು.
ಅವರ ಜೊತೆಗಾರ ವೈ ನಾಗೇಶ ನಾಯಕ ಅವರು ಈ ಅಪಘಾತದಲ್ಲಿ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದರು. ಆದರೆ, ಅಪಘಾತಕ್ಕೆ ಕಾರಣನಾದ ಲಾರಿ ಚಾಲಕ ನಾಗೇಶ ನಾಯಕ ಅವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಲಿಲ್ಲ. ಅಪಘಾತದ ಬಗ್ಗೆ ಪೊಲೀಸರಿಗೆ ಸಹ ಮಾಹಿತಿ ಕೊಡಲಿಲ್ಲ. ವೇಗವಾಗಿ ವಾಹನ ಓಡಿಸಿದ ಆತ ಕಿರವತ್ತಿ ಬಳಿ ಲಾರಿ ನಿಲ್ಲಿಸಿ ಪರಾರಿಯಾಗಿದ್ದು, ಪೊಲೀಸರು ಲಾರಿ ಚಾಲಕನ ಹುಡುಕಾಟ ನಡೆಸಿದ್ದಾರೆ.
ಅಪಘಾತದ ಬಗ್ಗೆ ಕೋಳಿಕೇರಿಯ ಚಹಾ ಅಂಗಡಿ ಮಾಲಕ ರಾಘವೇಂದ್ರ ಮರಾಠಿ ಅವರು ಪೊಲೀಸರಿಗೆ ಫೋನ್ ಮಾಡಿದರು. ಪಿಎಸ್‌ಐ ಸಿದ್ದಪ್ಪ ಗುಡಿ ತಕ್ಷಣ ಸ್ಥಳಕ್ಕೆ ದಾವಿಸಿದರು. ಪಿಐ ರಮೇಶ ನಾಯಕ ಅವರು ಅಪಘಾತದದ ಸ್ಥಳಕ್ಕೆ ತೆರಳಿದ್ದು, ತನಿಖೆ ಶುರು ಮಾಡಿದ್ದಾರೆ.
Discussion about this post